ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ವ್ಯಾಪ್ತಿಯ ನವಗ್ರಾಮ ಗೌಟನದಲ್ಲಿ 14 ವರ್ಷದ ಶಾಲಾ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಗುರುವಾರ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿದ್ದ ಕಾಶಿನಾಥ ಸಂತೋಷ್ ಲಮಾಣಿ ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ಥಳೀಯರು ದಿಕ್ಕೆಟ್ಟು ಹೋಗಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿ ಇಂತಹ ಘೋರ ನಿರ್ಧಾರಕ್ಕೆ ಮುಂದಾಗಲು ನಿಖರವಾದ ಕಾರಣವೇನೆಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಲು ಎಲ್ಲ ಆಯಾಮಗಳಿಂದಲೂ ತನಿಖೆ ಆರಂಭಿಸಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.
