ದಾಂಡೇಲಿ: ದಾಂಡೇಲಿ–ಹಳಿಯಾಳ ರಾಜ್ಯ ಹೆದ್ದಾರಿಯ ತಾಟಗೇರಾ ಕ್ರಾಸ್ ಸಮೀಪ ಮಂಗಳವಾರ ರಾತ್ರಿ ನಡೆದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರೆಯಾಗಿದ್ದ ಮಹಿಳೆ ಸಾವಿಗೀಡಾಗಿದ್ದಾರೆ.

ಬಡಕಾನಶಿರಡಾ ಗ್ರಾಮದ ಪಾರ್ವತಿ ಶಂಕರ ಕಾಂಬ್ರೇಕರ (50) ಮೃತ ಮಹಿಳೆ. ಅವರು ಪತಿ ಶಂಕರ ಕಾಂಬ್ರೇಕರ ಅವರೊಂದಿಗೆ ಮೊಮ್ಮಗನನ್ನು ನೋಡಲು ಆಲೂರಿನಲ್ಲಿರುವ ಮಗಳ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಕೆಎ-30 ಎ-2235 ಸಂಖ್ಯೆಯ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಪಾರ್ವತಿ ಅವರು ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಶಂಕರ ಕಾಂಬ್ರೇಕರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಗೊಂಡ ಪತ್ನಿಯನ್ನು ಶಂಕರ ಅವರು ಬಸ್ನಲ್ಲಿ ದಾಂಡೇಲಿಗೆ ಕರೆತಂದಿದ್ದು, ಅಲ್ಲಿಂದ ಪೊಲೀಸರು ಆಟೋರಿಕ್ಷಾದ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಪಾರ್ವತಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಅಪಘಾತ ಎಸಗಿ ಪರಾರಿಯಾದ ಬೊಲೆರೋ ವಾಹನವನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಒಂದು ಗಂಟೆಯೊಳಗೆ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಶಿವಾನಂದ ಅಂಬಿಗೇರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
