ಕಾರವಾರ:ಬಿಣಗಾದ ಸೋಮನಾಥ ಐಟಿಐ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಆರ್.ಬಿಯವರು ಹಾಕಿದ್ದ ಜಲ್ಲಿಕಲ್ಲಿನ ರಸ್ತೆ ತಡೆಗೋಡೆ ಬುಧವಾರ ಅಪಘಾತಕ್ಕೆ ಕಾರಣವಾಗಿದೆ.

ಸೋಮನಾಥ ಐಟಿಐ ಎದುರಿನ ಸ್ಥಳೀಯ ಕಚೇರಿ ಸಮೀಪದ ರಸ್ತೆ ಭಾಗದಲ್ಲಿ ದುರಸ್ತಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮಳೆಯಿಂದಾಗಿ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಆ ಮಾರ್ಗದ ಮೂಲಕ ವಾಹನ ಬರುವುದನ್ನು ತಡೆಯಲಾಗಿತ್ತು. ಆದರೆ, ಅಪಾಯ ಸೂಚಿಸುವ ಫಲಕಗಳು, ಪ್ರತಿಫಲಕ ಬ್ಯಾರಿಕೇಡ್ಗಳು ಅಥವಾ ಎಚ್ಚರಿಕೆ ದೀಪಗಳನ್ನು ಅಳವಡಿಸುವ ಬದಲು, ರಸ್ತೆ ಮಧ್ಯದಲ್ಲೇ ಕಲ್ಲು-ಮಣ್ಣನ್ನು ಹಾಕಿ ತಡೆ ನಿರ್ಮಿಸಿರುವುದು ದುರಂತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬುಧವಾರ ಮುಂಜಾನೆ ವೇಳೆ ಕಾರವಾರದಿಂದ ದಾವಣಗೆರೆ ಕಡೆಗೆ ಹೊರಟಿದ್ದ ವೈದ್ಯರೊಬ್ಬರ ಕಾರು ಕತ್ತಲಿನಲ್ಲಿ ಈ ತಡೆಗೋಡೆಯನ್ನು ಗಮನಿಸದೇ ಕಲ್ಲಿನ ಮೇಲೆ ಹತ್ತಿದೆ. ಪರಿಣಾಮವಾಗಿ ವಾಹನದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ದುರಸ್ತಿ ನಡೆಯುತ್ತಿರುವ ಸ್ಥಳದಲ್ಲಿ ಸರಿಯಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ, ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಡೆಗೋಡೆ ನಿರ್ಮಿಸಿರುವುದು ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ ಎಂದು ಜನ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ.
