ಕಾರವಾರ:ತಾಲೂಕಿನ ಮುದಗಾ ಸಮೀಪದ ರೈಲು ಟನೆಲ್ ಬಳಿ ಎರಡು ಕಡವೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತಪಟ್ಟಿರುವ ಪ್ರಾಣಿಗಳ ಕಾಲುಗಳನ್ನು ಕತ್ತರಿಸಿ ಮಾಂಸ ಕದ್ದೊಯ್ಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಪ್ರಕರಣ ರೈಲು ಅಪಘಾತವೇ ಅಥವಾ ವನ್ಯಜೀವಿ ಕಳ್ಳಬೇಟೆಗೆ ಸಂಬಂಧಿಸಿದದ್ದೇ ಎಂಬ ಎರಡು ಆಯಾಮಗಳಲ್ಲಿ ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.

ಮೃತಪಟ್ಟಿರುವವು ಸುಮಾರು 6ರಿಂದ 7 ವರ್ಷದ ಹೆಣ್ಣು ಹಾಗೂ ಗಂಡು ಕಡವೆಗಳೆಂದು ಅಂದಾಜಿಸಲಾಗಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಬುಧವಾರ ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ರೈಲು ಹಳಿಯ ಪಕ್ಕದಲ್ಲೇ ಕಡವೆಗಳು ಬಿದ್ದಿದ್ದವು ಎನ್ನಲಾಗಿದ್ದು, ಬಳಿಕ ಅವುಗಳ ಕಾಲುಗಳನ್ನು ಕತ್ತರಿಸಿ ಮಾಂಸ ಕೊಂಡೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆರ್‌ಎಫ್‌ಓ ಕಿರಣ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆದಿದ್ದು, ಮುದಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಡವೆಗಳ ಮಾಂಸ ಕದ್ದೊಯ್ದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಈ ಘಟನೆ ವನ್ಯಜೀವಿಗಳ ಸುರಕ್ಷತೆ ಕುರಿತಾಗಿ ಮತ್ತೆ ಪ್ರಶ್ನೆ ಎಬ್ಬಿಸಿದ್ದು, ರೈಲು ಹಳಿಗಳ ಸಮೀಪ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳ ಸಂಚಾರದ ಮೇಲ್ವಿಚಾರಣೆ ಮತ್ತು ಕಳ್ಳಬೇಟೆ ತಡೆ ಕ್ರಮಗಳ ಅಗತ್ಯತೆಯನ್ನೂ ಮನಗಾಣಿಸಿದೆ. ಪ್ರಕರಣದ ನಿಜಾಂಶ ಹೊರಬರಲು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.
