ಸದಾಶಿವಗಡದ ಯುವಕ ಚಿಕಿತ್ಸೆ ಫಲಿಸದೆ ಗೋವಾದ ಆಸ್ಪತ್ರೆಯಲ್ಲಿ ಸಾವು
ಕಾರವಾರ: ಸದಾಶಿವಗಡ ಸಮೀಪ ವಾರದ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದ ಯುವಕನೊಬ್ಬ ಕೊನೆಗೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸದಾಶಿವಗಡ ನಿವಾಸಿ ಶುಭಂ ರಾಣೆ (32) ಮೃತರು.
ಜುಲೈ 3ರಂದು ಸಂಜೆ ದುರ್ಗಾದೇವಿ ದೇವಸ್ಥಾನ ಬಳಿಯ ತಾರಿವಾಡಾ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು. ಶುಭಂ ಬುಲೆಟ್ ಮೋಟಾರ್ಸೈಕಲ್ನಲ್ಲಿ ಲಿಂಕ್ ರಸ್ತೆಯಿಂದ ತಾರಿವಾಡಾ ಕಡೆಗೆ ತೆರಳುತ್ತಿದ್ದಾಗ ಏಕಾಏಕಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಶಮಸುದ್ದೀನ್ ದರ್ಗಾ ಕಾಂಪೌಂಡ್ ಗೋಡೆಗೆ ಅಪ್ಪಳಿಸಿತ್ತು. ಡಿಕ್ಕಿಯ ರಭಸಕ್ಕೆ ಆತ ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ.
ಅಪಘಾತದ ತಕ್ಷಣ ಸ್ಥಳೀಯರು ಆತನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು. ಬಳಿಕ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಗೋವಾದ ಪಣಜಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶುಭಂ ಶುಕ್ರವಾರ ಮೃತಪಟ್ಟಿದ್ದಾನೆ.
ಯುವಕನ ಅಕಾಲಿಕ ಸಾವು ಸದಾಶಿವಗಡ ಭಾಗದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಘಟನೆ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
