ಅಂಕೋಲಾ ಬಸ್ ನಿಲ್ದಾಣದ ಬಳಿ ಇತ್ತೀಚೆಗೆ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿರುವ ಸ್ಥಳೀಯ ಪೊಲೀಸರು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಸರಣಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಸಿಯ ಅರೇಕೊಪ್ಪ ನಿವಾಸಿಯಾದ 33 ವರ್ಷದ ಖಾಲಿದ ಷರೀಫ್ ಸಾಬ್ ಕನವಳ್ಳಿ ಬಂಧಿತ ಆರೋಪಿಯಾಗಿದ್ದು, ಈತನ ಬಂಧನದಿಂದಾಗಿ ಹಲವು ದಿನಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಕಳೆದ ಜೂನ್ 26 ರಂದು ಬೆಳಿಗ್ಗೆ ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಬಳಿ ನಿಲ್ಲಿಸಲಾಗಿದ್ದ ಸುಮಾರು 35,000 ರೂಪಾಯಿ ಮೌಲ್ಯದ ಆಕ್ಟಿವಾ ಸ್ಕೂಟರ್ (ಕೆಎ 30/ಇಇ-2938) ಕಳ್ಳತನವಾಗಿತ್ತು. ಈ ಕುರಿತು ಸಲ್ಲಿಕೆಯಾಗಿದ್ದ ದೂರಿನ ಅನ್ವಯ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ತನಿಖೆಯನ್ನು ಚುರುಕುಗೊಳಿಸಿದ ತಂಡವು ಜುಲೈ 8 ರಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿಯು ತಾನೇ ಬೈಕ್ ಕದ್ದಿರುವುದನ್ನು ಒಪ್ಪಿಕೊಂಡಿದ್ದು, ಆತನಿಂದ ಕದ್ದಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತ ಆರೋಪಿ ಸಣ್ಣಪುಟ್ಟ ಕಳ್ಳನಲ್ಲ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದ್ದು, ಈತನ ವಿರುದ್ಧ ಈಗಾಗಲೇ ಶಿರಸಿ ಗ್ರಾಮೀಣ ಮತ್ತು ಎನ್.ಎಂ ಠಾಣೆಗಳಲ್ಲಿ ತಲಾ ಮೂರು, ಹಾಗೂ ಬನವಾಸಿ, ಯಲ್ಲಾಪುರ, ಕಾರವಾರ ಶಹರ, ಕುಮಟಾ, ಹಳಿಯಾಳ ಮತ್ತು ಧಾರವಾಡ ಜಿಲ್ಲೆಯ ತಡಸ ಠಾಣೆಗಳಲ್ಲಿ ತಲಾ ಒಂದರಂತೆ ಒಟ್ಟು 10ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಅಂಕೋಲಾದಲ್ಲಿ ನಡೆದ ಈ ಒಂದು ಕಳ್ಳತನದ ಬೆನ್ನುಹತ್ತಿದ ಪೊಲೀಸರಿಗೆ ಭಾರಿ ಜಾಲವೊಂದನ್ನು ಪತ್ತೆಹಚ್ಚಿದಂತಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಉಪವಿಭಾಗದ ಡಿವೈಎಸ್ಪಿ ಗಿರೀಶ ಎಸ್.ವಿ. ಅವರ ಸಮರ್ಥ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ, ಪಿಎಸ್ಐಗಳಾದ ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ನಾಯ್ಕ, ಮಹಾದೇವ ಸಿದ್ದಿ, ಆಸಿಫ್ ಆರ್.ಕೆ. ಮತ್ತು ಗಿರೀಶ ಲಮಾಣಿ ಅವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
