ಹುಲಿ ಗಣತಿಯಂತಹ ಮಹತ್ವದ ಅರಣ್ಯ ಸಂರಕ್ಷಣಾ ಕಾರ್ಯಕ್ಕೆ ದಟ್ಟ ಅರಣ್ಯದಲ್ಲಿ ಅಳವಡಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಅಂಕೋಲಾ ಪೊಲೀಸರು ಭೇದಿಸಿದ್ದಾರೆ. ತ್ವರಿತ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವುದರೊಂದಿಗೆ ಕಳುವಾಗಿದ್ದ ಕ್ಯಾಮೆರಾಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಂಡಿದ್ದು, ಅರಣ್ಯ ಇಲಾಖೆಗೆ ಮಹತ್ವದ ಯಶಸ್ಸು ದೊರೆತಿದೆ.
ಬಂಧಿತ ಆರೋಪಿಯನ್ನು ಅಂಕೋಲಾ ತಾಲೂಕಿನ ಹಿಲ್ಲೂರು ಸಮೀಪದ ಕೋಳಗಿ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ದುರ್ಗಾ ದೇವು ಹರಿಕಾಂತ್ರ (54) ಎಂದು ಗುರುತಿಸಲಾಗಿದೆ.
ಅಖಿಲ ಭಾರತ ಹುಲಿ ಗಣತಿಯ ಅಂಗವಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ಮೇ 1, 2026ರಂದು ಹೊಸಕಂಬಿ ವಲಯದ ದಟ್ಟ ಅರಣ್ಯ ಪ್ರದೇಶದಲ್ಲಿ ‘ಕಡಿಬ್ಯಾಕ್’ (Cuddeback) ಕಂಪನಿಯ ಆಫ್‌ಲೈನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮೇ 12ರ ಮಧ್ಯಾಹ್ನದಿಂದ ಮೇ 13ರ ಬೆಳಗಿನ ಜಾವದ ನಡುವೆ ಈ ಕ್ಯಾಮೆರಾಗಳು ನಾಪತ್ತೆಯಾಗಿದ್ದವು. ಇದರಿಂದ ಹುಲಿ ಗಣತಿ ಕಾರ್ಯಕ್ಕೂ ಅಡಚಣೆ ಉಂಟಾಗಿತ್ತು.
ಈ ಸಂಬಂಧ ಹಿಲ್ಲೂರು ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ಅವರು ಮೇ 16ರಂದು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, BNS-2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನೇ ಕಳ್ಳತನ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಆತನಿಂದ ಅರಣ್ಯ ಇಲಾಖೆಗೆ ಸೇರಿದ ಬೆಲೆಬಾಳುವ ಕ್ಯಾಮೆರಾಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಡಿವೈಎಸ್ಪಿ ಗಿರೀಶ್ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ, ಪಿಎಸ್‌ಐ ಲಲಿತಾ ರಜಪೂತ ಹಾಗೂ ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಶೋಭಾ ನಾಯ್ಕ, ಭಗವಾನ್ ಗಾಂವಕರ್, ಆಸಿಫ್ ಆರ್.ಕೆ. ಮತ್ತು ಗಿರೀಶ್ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
