ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Crime

25 ವರ್ಷದಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕನ ಬಂಧನ!

Pakka News Web • 25 ಆಗಸ್ಟ್ 2026,

ರಸ್ತೆಯಲ್ಲಿ ವಾಹನ ಓವರ್‌ಟೇಕ್ ಮಾಡುವ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಳೆದ 25 ವರ್ಷಗಳಿಂದ ಕಾನೂನಿನ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಲಾರಿ ಚಾಲಕನೊಬ್ಬ ಕೊನೆಗೂ ಯಲ್ಲಾಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗುಜರಾತ್ ರಾಜ್ಯದ ಮುಂಡವಾಡ ಮೂಲದ ಕೇಸುಬಾಯಿ ಮಿನಂದಬಾಯಿ ಸಿಸೋಡಿಯಾ (58) ಬಂಧಿತ ಆರೋಪಿ.

ಘಟನೆಯ ವಿವರಕ್ಕೆ ಹೋದರೆ, 2001ರ ಮೇ 5ರಂದು ಯಲ್ಲಾಪುರದ ಜೋಗಿಕೊಪ್ಪ ತಿರುವಿನ ಸಮೀಪ ಕೆಎಸ್‌ಆರ್‌ಟಿಸಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಲಾರಿ ಚಾಲಕ ಕೇಸುಬಾಯಿ ಜಗಳ ತೆಗೆದಿದ್ದನು. ಸಾರ್ವಜನಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿ, ಬಸ್ ಚಾಲಕನಿಗೆ ನಿಂದಿಸಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಡಿ ಆತನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರ, ಆತ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದನು. 2010ರವರೆಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದ ಆರೋಪಿ, ನಂತರ ಸಂಪೂರ್ಣವಾಗಿ ತಲೆಮರೆಸಿಕೊಂಡು ನ್ಯಾಯಾಲಯದ ವಾರಂಟ್‌ಗೂ ಕ್ಯಾರೆ ಎನ್ನದೆ ತಲೆತಪ್ಪಿಸಿಕೊಂಡಿದ್ದನು.

ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಯಲ್ಲಾಪುರ ಪ್ರಭಾರಿ ಸಿಪಿಐ ರಮೇಶ ಹಾನಾಪುರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು.

ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ಮೂಳೆ, ಮಾರುತಿ, ಸಂತೋಷ ಬಾಳೇರ, ಬಸವರಾಜ ಡಿ.ಕೆ., ಪರಮೇಶ್ವರ ಎಸ್.ಕೆ., ರೇಖಾ ಎಂ.ಎಸ್., ಮಹಮದ್ ಶಫಿ ಮತ್ತು ಕಾರವಾರ ತಾಂತ್ರಿಕ ವಿಭಾಗದ ಉದಯ ಗುನಗಾ, ಬಬನ ಕದಂ, ಮಹಾಲಿಂಗ ಸಾವಳಗಿ ಅವರ ನಿರಂತರ ತಾಂತ್ರಿಕ ಕಾರ್ಯಾಚರಣೆಯ ಫಲವಾಗಿ ಗುಜರಾತ್‌ನಲ್ಲಿದ್ದ ಆರೋಪಿಯ ಅಡಗುತಾಣವನ್ನು ನಿಖರವಾಗಿ ಪತ್ತೆಹಚ್ಚಿ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250