ಕುಟುಂಬದಲ್ಲಿ ಸಾಮಾನ್ಯವಾಗಿ ಉಂಟಾಗುವ ಜಗಳ ಕೊ*ಲೆ ಹಂತಕ್ಕೆ ತಲುಪಿದ್ದು ಪತಿಯೇ ಪತ್ನಿಯ ಕತ್ತು ಹಿಸುಕಿ ಹ*ತ್ಯೆ ಮಾಡಿರುವ ಆಘಾತಕಾರಿ ಘಟನೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಗುಂಡಾದಲ್ಲಿ ನಡೆದಿದೆ. ಪ್ರಕರಣದ ಆರೋಪಿಯನ್ನು ಮಂಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಮೃತಳನ್ನು ಜೋಯಿಡಾ ತಾಲೂಕಿನ ನಂದಿಗದ್ದೆಯ ಹರಿಶ್ಚಂದ್ರ ದೇಸಾಯಿ ದೇಶಭಂಡಾರಿ ಅವರ ಪುತ್ರಿ ಮಂಗಲಾ ಗಣಪತಿ ನಾಯ್ಕ (27) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ಮಂಗಲಾಳ ಬಾಯಿ ಮತ್ತು ಮೂಗನ್ನು ಬಲವಂತವಾಗಿ ಒತ್ತಿಹಿಡಿದು, ಬಳಿಕ ಕತ್ತು ಹಿಸುಕಿ ಪತಿ ಗಣಪತಿ ಮಂಜುನಾಥ ನಾಯ್ಕ ಹ*ತ್ಯೆ ಮಾಡಿದ್ದಾನೆ ಎಂದು ಮೃತಳ ಸಹೋದರಿ ಲಲಿತಾ ಸಚಿನ್ ಗುಂಜಿಕರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 57/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗಣಪತಿ ನಾಯ್ಕನನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಗಿರೀಶ ಹಾಗೂ ಸಿಪಿಐ ಜಗದೀಶ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಕುಮಾರ್ ಕಾಂಬಳೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಗಳ ಭೀಕರ ಸಾವಿನಿಂದ ಆಘಾತಕ್ಕೊಳಗಾದ ಪೋಷಕರಾದ ಹರಿಶ್ಚಂದ್ರ ದೇಸಾಯಿ ಹಾಗೂ ಲಕ್ಷ್ಮೀ ಅವರು ಕಣ್ಣೀರಿಡುತ್ತಾ, ಮಗಳ ಸಾವಿಗೆ ಕಾರಣನಾದ ಆರೋಪಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮಂಗಲಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
