ಕುಮಟಾ:ಜನರಿಂದ ತುಂಬಿದ್ದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳವಾಗಿದ್ದ ಪ್ರಕರಣಕ್ಕೆ ಕುಮಟಾ ಪೊಲೀಸರು ತೆರೆ ಎಳೆದಿದ್ದಾರೆ.
ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ಸುಳಿವುಗಳನ್ನು ಬೆನ್ನತ್ತಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವಾಗಿದ್ದ ಸುಮಾರು 2.60 ಲಕ್ಷ ರೂ. ಮೌಲ್ಯದ ಬಂಗಾರದ ಕರಿಮಣಿ ಸರವನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕೊಳ್ಳಿ ನಿವಾಸಿ ಹಾಗೂ ಆರೋಗ್ಯ ಕಾರ್ಯಕರ್ತೆಯಾಗಿರುವ ಭಾರತಿ ಶಿವು ನಾಯಕ ಅವರು ಕಳೆದ ಆ.18ರಂದು ಮಧ್ಯಾಹ್ನ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುವ ಸಂದರ್ಭದಲ್ಲಿದ್ದ ಜನಜಂಗುಳಿಯನ್ನು ದುರುಪಯೋಗಪಡಿಸಿಕೊಂಡ ಕಳ್ಳರು, ಅವರ ಗಮನ ಬೇರೆಡೆ ಇರುವ ವೇಳೆ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಪರ್ಸ್‌ನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಪರ್ಸ್‌ನಲ್ಲಿದ್ದ ಮಾಂಗಲ್ಯ ಸರ ಕಳೆದುಕೊಂಡಿರುವುದು ತಿಳಿದ ಬಳಿಕ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದರು. ಬಸ್ ನಿಲ್ದಾಣ ಮಾತ್ರವಲ್ಲದೆ ಪಟ್ಟಣ ಮತ್ತು ತಾಲೂಕಿನ ವಿವಿಧ ಭಾಗಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ನೂರಕ್ಕೂ ಅಧಿಕ ಕ್ಯಾಮೆರಾಗಳ ದೃಶ್ಯಗಳನ್ನು ಜೋಡಿಸಿ ಪರಿಶೀಲಿಸಿದ ಬಳಿಕ ಶಂಕಿತರ ಸಂಚಾರದ ಕುರಿತು ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಈ ಸುಳಿವಿನ ಬೆನ್ನತ್ತಿದ ಪೊಲೀಸ್ ತಂಡ ಆ.28ರಂದು ಬಡಾಳ–ಸೊಪ್ಪಿನಹೊಸಳ್ಳಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಸೀಮಾಬಾನು (42) ಮತ್ತು ಶಮ್ಮಾ ಬುಡಿಯಾ (27) ಅವರನ್ನು ವಶಕ್ಕೆ ಪಡೆದುಕೊಂಡಿದೆ. ವಿಚಾರಣೆ ವೇಳೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ದೊರೆತಿದ್ದು, ಬಳಿಕ ಆರೋಪಿಗಳಿಂದ 20.180 ಗ್ರಾಂ ತೂಕದ ಬಂಗಾರದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 2.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕಳವಾದ ಆಭರಣವನ್ನು ಮರಳಿ ವಶಕ್ಕೆ ಪಡೆಯುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ನೇತೃತ್ವದಲ್ಲಿ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಮತ್ತು ಗುರು ನಾಯಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ತಂಡದ ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್‌ಪಿ ಬಿ. ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನಜಂಗುಳಿ ಹೆಚ್ಚಿರುವ ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಹಣ ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
