ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ (ಹೆದ್ದಾರಿ 52) ಅರಬೈಲ್ ಘಟ್ಟ ಪ್ರದೇಶದ ಕಡಿದಾದ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆಯ ಕೈ ಮೂಳೆ ಮುರಿತಕ್ಕೊಳಗಾಗಿದೆ.
ತಿರುವಿನಲ್ಲಿ ಅತಿ ವೇಗವಾಗಿ ಬಂದ ಮಿನಿ ಬಸ್ ನಿಯಂತ್ರಣ ತಪ್ಪಿ ಮುನ್ನುಗ್ಗುತ್ತಿದ್ದಂತೆ, ಎದುರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು ದೊಡ್ಡ ಅಪಘಾತ ತಪ್ಪಿಸಲು ವಾಹನವನ್ನು ರಸ್ತೆ ಬದಿಯ ಗುಡ್ಡದತ್ತ ತಿರುಗಿಸಿದ್ದಾನೆ.

ಈ ವೇಳೆ ಮಿನಿ ಬಸ್ ಕೆಎಸ್ಆರ್ಟಿಸಿ ಬಸ್ನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳು ಭಾಗಶಃ ಜಖಂಗೊಂಡಿವೆ. ಚಾಲಕನ ತಕ್ಷಣದ ಎಚ್ಚರಿಕೆಯ ಕ್ರಮದಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರ ನೆರವಿನೊಂದಿಗೆ ತಕ್ಷಣವೇ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
