ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ: ಐವರ ಬಂಧನ

Pakka News Web • 8 ಸೆಪ್ಟೆಂ 2026,

ಅಂಕೋಲಾ: ನಿಜವಾದ ಭೂಮಾಲೀಕ ಅರಿವಿಗೆ ಬಾರದಂತೆ ಅವರ ಜಮೀನಿನ ಮಾಲೀಕರಾಗಿ ಬೇರೆಯವರನ್ನು ನಿಲ್ಲಿಸಿ, ನಕಲಿ ಸಹಿ ಹಾಗೂ ದಾಖಲೆಗಳ ಮೂಲಕ ಆಸ್ತಿಯನ್ನೇ ಪರಭಾರೆ ಮಾಡುತ್ತಿದ್ದ ಜಾಲವೊಂದು ಅಂಕೋಲಾದಲ್ಲಿ ಬಯಲಾಗಿದೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಉಪನೋಂದಣಾಧಿಕಾರಿ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬಾಳೆಗುಳಿಯ ಮಂಜುನಾಥ ಆನಂದು ಗೌಡ, ಹೊನ್ನೇಕೇರಿ ಕ್ರಾಸ್‌ನ ಶಂಕರ ರಾಮದಾಸ ಅಣ್ವೇಕರ, ಕೃಷ್ಣಾಪುರದ ಚೆನ್ನಪ್ಪ ಅಲಿಯಾಸ್ ರವಿ ಜಟ್ಟಿ ನಾಯ್ಕ ಹಾಗೂ ಬೆಳಸೆಯ ದರ್ಶನ ನಾರಾಯಣ ಗೌಡ ಮತ್ತು ಯಂಕು ಹುಲಿಯಾ ಗೌಡ ಎಂದು ಗುರುತಿಸಲಾಗಿದೆ.

ಬೋಗ್ರಿಬೈಲ್ ಗ್ರಾಮದ ಸರ್ವೆ ನಂ. 79/ಅ4ರ 01-14-00 ವಿಸ್ತೀರ್ಣದ ಜಮೀನು ಪ್ರಕರಣದ ಕೇಂದ್ರಬಿಂದುವಾಗಿದೆ. ಫಿರ್ಯಾದಿದಾರರ ಕುಟುಂಬಕ್ಕೆ ಸೇರಿದ ಈ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಫಿರ್ಯಾದಿದಾರರು ಹಾಗೂ ಅವರ ಸಹೋದರರೇ ಎಂಬಂತೆ ಸುಳ್ಳು ವ್ಯಕ್ತಿಗಳನ್ನು ಹಾಜರುಪಡಿಸಿ, ನಕಲಿ ಸಹಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನಿನ ಮಾರಾಟ ಪ್ರಕ್ರಿಯೆ ನಡೆಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 171/2026ರಂತೆ ಬಿ.ಎನ್.ಎಸ್.-2023ರ ವಿವಿಧ ಕಲಂಗಳು ಹಾಗೂ ಕಲಂ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರವಾರ ಉಪವಿಭಾಗದ ಡಿವೈಎಸ್‌ಪಿ ಎಸ್.ವಿ. ಗಿರೀಶ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಗಳ ಚಲನವಲನ ಪತ್ತೆಹಚ್ಚಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರನ್ನೂ ವಶಕ್ಕೆ ಪಡೆದಿದ್ದಾರೆ. 

ವಿಚಾರಣೆ ವೇಳೆ ಆರೋಪಿಗಳು ಕೃತ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, ಬಳಿಕ ಅವರನ್ನು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಸ್.ವಿ. ಗಿರೀಶ್, ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250