ಜೊಯಿಡಾ:ಕಾರವಾರ-ಜೋಯಿಡಾ ಮುಖ್ಯರಸ್ತೆಯ ಚಾಪೋಲಿ ಎಂಬಲ್ಲಿ ಗುರುವಾರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕರ ನಿಯಂತ್ರಣ ತಪ್ಪಿದ ಎರಡು ಸರ್ಕಾರಿ ಸಾರಿಗೆ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಪರಿಣಾಮವಾಗಿ ಸುಮಾರು 10 ರಿಂದ 13 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಗುರುವಾರ ಜನಾಂದೋಲನ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಉಳವಿಯಿಂದ ಇಚಲಕರಂಜಿ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ಹಾಗೂ ಬೆಳಗಾವಿಯಿಂದ ಕಾರವಾರದತ್ತ ಮುನ್ನುಗ್ಗುತ್ತಿದ್ದ ಮತ್ತೊಂದು ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಬೆಳಗಿನ ಅವಧಿಯಾಗಿದ್ದರಿಂದ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಡಿಕ್ಕಿಯ ರಭಸಕ್ಕೆ ಪ್ರಯಾಣಿಕರು ದಿಕ್ಕಾಪಾಲಾಗಿ ಸೀಟುಗಳಿಗೆ ಅಪ್ಪಳಿಸಿದ್ದಾರೆ. ಗಾಯಗೊಂಡ ತಕ್ಷಣವೇ ಸ್ಥಳೀಯರು ಮತ್ತು ಸಹಪ್ರಯಾಣಿಕರು ರಕ್ಷಣೆಗೆ ಧಾವಿಸಿದ್ದು, ಗಾಯಾಳುಗಳನ್ನು ತುರ್ತಾಗಿ ಜೋಯಿಡಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಖಾಕಿ ಪಡೆ: ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಜೋಯಿಡಾ ಪಿಎಸ್ಐ ಜಗದೀಶ್ ನಾಯಕ್ ಹಾಗೂ ಅವರ ಸಿಬ್ಬಂದಿ ವರ್ಗದವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಪೊಲೀಸರು, ರಸ್ತೆಯ ಮಧ್ಯದಲ್ಲೇ ಸಿಲುಕಿಕೊಂಡಿದ್ದ ಬಸ್ಸುಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡರು. ಈ ಭೀಕರ ಅಪಘಾತದಿಂದಾಗಿ ಕಾರವಾರ – ಜೋಯಿಡಾ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಸಾರ್ವಜನಿಕರು ರಸ್ತೆಯಲ್ಲೇ ಕಾಯುವಂತಾಯಿತು. ಸದ್ಯ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
