ಸಿದ್ದಾಪುರ: ತಾಲೂಕಿನ ಹಾಳದಕಟ್ಟಾದ ಮನೆಯೊಂದರ ಬೀಗ ಮುರಿದು 2 ಸಾವಿರ ರೂ. ನಗದು ಕಳವು ಮಾಡಿದ್ದ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಭೇದಿಸಿ, ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ನ ಮೂವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಆರೋಪಿಗಳಿಂದ 330 ರೂ. ನಗದು ಹಾಗೂ ಸುಮಾರು 2 ಲಕ್ಷ ರೂ. ಮೌಲ್ಯದ ಸುಜುಕಿ ಸ್ವಿಫ್ಟ್ ಡಿಸೈರ್ ಕಾರನ್ನು ಜಪ್ತಿ ಮಾಡಲಾಗಿದೆ.
ಹಾಳದಕಟ್ಟಾ ನಿವಾಸಿ ರಾಜು ಉಮೇಶ ಜಾಧವ್ ಅವರು ಅಕ್ಟೋಬರ್ 3ರಂದು ಸಂಜೆ 5 ಗಂಟೆ ಸುಮಾರಿಗೆ ತಮ್ಮ ಮೂಲ ಮನೆಯ ಬಾಗಿಲಿಗೆ ಬೀಗ ಹಾಕಿ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಹಾಗೂ ಮಾನಸಿಕ ಅಸ್ವಸ್ಥರಾಗಿರುವ ತಮ್ಮನನ್ನು ಕರೆದುಕೊಂಡು ತೊಗರ್ಸಿಗೆ ತೆರಳಿದ್ದರು. ಅಕ್ಟೋಬರ್ 5ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಯ ಬಾಗಿಲು ತೆರೆದಿರುವುದಾಗಿ ಅಕ್ಕಪಕ್ಕದವರು ದೂರವಾಣಿ ಮೂಲಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಒಳ ಪ್ರವೇಶಿಸಿದ್ದು, ಕೋಣೆಯಲ್ಲಿದ್ದ ಗೋದ್ರೇಜ್ನ ಲಾಕನ್ನೂ ಮುರಿದು ಒಳಗೆ ಇರಿಸಲಾಗಿದ್ದ 2 ಸಾವಿರ ರೂ. ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 207/2026ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಗೋವಿಂದಪ್ಪ ತೊಳೆಪ್ಪ (29), ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿಯ ಕೃಷ್ಣ ಹುಸೇನ ಮುಳಗುಂದ (20) ಹಾಗೂ ಹುಬ್ಬಳ್ಳಿಯ ತಾರೆಹಾಳ ರಸ್ತೆಯ ಗಣೇಶ್ ಗಂಗಪ್ಪ (22) ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ.
ಬಂಧಿತರಿಂದ ₹330 ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ಎನ್ನಲಾದ ಸುಮಾರು ₹2 ಲಕ್ಷ ಮೌಲ್ಯದ ಸುಜುಕಿ ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಗಂಗಪ್ಪ ಯಲ್ಲಪ್ಪ ಕುಂಚಿಕೊರವ (ಚಿಂಚಲಿ, ರಾಯಬಾಗ) ಹಾಗೂ ಮಂಜು ಖಂಡು ವಡ್ಡರ (ವಡ್ಡರಗಲ್ಲಿ, ಚಿಂಚಲಿ) ಎಂಬ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳು ರೂಢಿಗತ ಅಪರಾಧಿಗಳಾಗಿದ್ದು, ಗದಗ, ಧಾರವಾಡ, ಉತ್ತರ ಕನ್ನಡ ಹಾಗೂ ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದರೋಡೆ, ಡಕಾಯಿತಿ, ಮನೆ ಕಳ್ಳತನ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದಾಪುರದಲ್ಲಿ ಸರಣಿ ಕಳ್ಳತನ ನಡೆಸುವ ಉದ್ದೇಶದಿಂದ ಈ ತಂಡ ಬಂದಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ಮುಂದುವರಿದಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
