ಕಾರವಾರ:ಕಾರವಾರ ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯಲ್ಲಿ ಕಯಾಕ್ ಬೋಟ್ ಮೂಲಕ ವಿಹಾರಕ್ಕೆ ತೆರಳಿ ಆಕಸ್ಮಿಕವಾಗಿ ನಾಪತ್ತೆಯಾಗಿದ್ದ ಕಾರವಾರದ ಪ್ರಮುಖ ರೆಸ್ಟೋರೆಂಟ್ ಉದ್ಯಮಿ ಸತೀಶ್ ಮಾಳ್ಸೇಕರ್ ಅವರ ಮೃತದೇಹ ಕೊನೆಗೂ ಪತ್ತೆಯಾಗಿದೆ. ಬುಧವಾರ ಸಂಜೆ ನಡೆದಿದ್ದ ಈ ದುರಂತದ ಬೆನ್ನಲ್ಲೇ ನಡೆಸಲಾದ ಸುದೀರ್ಘ ಜಂಟಿ ಶೋಧ ಕಾರ್ಯಾಚರಣೆಯ ನಂತರ ಗುರುವಾರ ಅವರ ಶವ ಪತ್ತೆಯಾಗಿದೆ.
ಕಾರವಾರದ ನೌಕಾನೆಲೆ ಪ್ರದೇಶದಲ್ಲಿ ಯಶಸ್ವಿಯಾಗಿ ರೆಸ್ಟೋರೆಂಟ್ ಉದ್ಯಮ ನಡೆಸುತ್ತಿದ್ದ ಸತೀಶ್ ಮಾಳ್ಸೇಕರ್, ಬುಧವಾರ ಸಂಜೆ ಹಣಕೋಣದ ‘ರಿವರ್ ಎಡ್ಜ್ ಪ್ಯಾರಡೈಸ್ ರೆಸಾರ್ಟ್’ ವ್ಯಾಪ್ತಿಯ ಕಾಳಿ ನದಿಗೆ ಕಯಾಕಿಂಗ್ ಮಾಡಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರು ನದಿಯ ನೀರಿನಲ್ಲಿ ಕಣ್ಮರೆಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಧಾವಿಸಿ ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ನದಿಯ ಅತಿಯಾದ ಆಳ ಹಾಗೂ ನೀರಿನ ತೀವ್ರ ಸೆಳೆತದಿಂದಾಗಿ ಬುಧವಾರ ರಾತ್ರಿಯವರೆಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ವಿಧಿ ಆಟ: ಹಿಂದೆ ಕೆಲಸ ಮಾಡಿದ್ದ ರೆಸಾರ್ಟ್‌ನಲ್ಲೇ ದುರಂತ ಅಂತ್ಯ! ಗುರುವಾರ ಮುಂಜಾನೆಯಿಂದಲೇ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದಾಗ ಕೊನೆಗೂ ಸತೀಶ್ ಅವರ ಮೃತದೇಹ ಪತ್ತೆಯಾಗಿದ್ದು, ತಕ್ಷಣವೇ ಮರಣೋತ್ತರ ಪರೀಕ್ಷೆಗಾಗಿ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ದುರದೃಷ್ಟದ ಸಂಗತಿಯೆಂದರೆ, ಮೃತ ಸತೀಶ್ ಮಾಳ್ಸೇಕರ್ ಅವರು ಸುಮಾರು ಎಂಟು ವರ್ಷಗಳ ಹಿಂದೆ ಇದೇ ‘ರಿವರ್ ಎಡ್ಜ್ ಪ್ಯಾರಡೈಸ್ ರೆಸಾರ್ಟ್’ನಲ್ಲಿ ಮ್ಯಾನೇಜರ್ ಆಗಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರು. ತಾನು ಕೆಲಸ ಮಾಡಿದ್ದ ಹಳೇ ನೆನಪುಗಳ ಜಾಗದಲ್ಲಿ ಕಾಲ ಕಳೆಯಲು ಬಂದಿದ್ದ ಉದ್ಯಮಿಯ ಪ್ರಾಣವನ್ನೇ ಕಾಳಿ ನದಿ ಈ ರೂಪದಲ್ಲಿ ಕಸಿದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ಕಂಬನಿ ಮೂಡಿಸಿದೆ.
ಕಯಾಕಿಂಗ್ ಮಾಡುವಾಗ ಕಡ್ಡಾಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತೇ ಅಥವಾ ಲೈಫ್ ಜಾಕೆಟ್ ಧರಿಸಿರಲಿಲ್ಲವೇ ಎಂಬ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
