ಮುಂಡಗೋಡ: ರಸ್ತೆಯ ಮಧ್ಯೆ ಬರ್ತ್ಡೇ ಪಾರ್ಟಿ ಮಾಡುವುದನ್ನು ಪ್ರಶ್ನಿಸಿ, ದಾರಿ ಬಿಡುವಂತೆ ಕೇಳಿದ್ದಕ್ಕೆ ಸ್ಕೂಟರ್ ಸವಾರನ ಮೇಲೆ ಯುವಕರ ತಂಡ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮುಂಡಗೋಡದ ಬೇಕರಿಯಲ್ಲಿ ಕೆಲಸ ಮಾಡುವ ಸಂತೋಷ ಕಟ್ಟಿಮನಿ ಹಲ್ಲೆಗೊಳಗಾದವರು. ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದರು. ಕೊಪ್ಪ ಗ್ರಾಮದಲ್ಲಿರುವ ತಮ್ಮ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಮಂಜು, ಪ್ರಜ್ವಲ್ ಹಾಗೂ ಶ್ರೇಯಸ್ ಈ ಮೂವರು ಸೇರಿಕೊಂಡು ರಸ್ತೆಯಲ್ಲಿ ಬರ್ತ್ಡೇ ಪಾರ್ಟಿ ಮಾಡುತ್ತಿದ್ದರು.
ಅವರನ್ನು ನಾನು ಮನೆಗೆ ಹೋಗಬೇಕು, ರಸ್ತೆಯ ಮೇಲಿಂದ ಸ್ವಲ್ಪ ಎದ್ದೇಳಿ ಎಂದು ಕೇಳಿದಾಗ, ಅವರು ಎದ್ದೇಳದೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ನಿನಗೆ ಜಾಗ ಕೊಡುವುದಿಲ್ಲ, ಪಾರ್ಟಿ ಮುಗಿಯುವವರೆಗೆ ಇಲ್ಲೇ ಇರಬೇಕು ಎಂದು ಹೇಳಿ ಕೈಯಿಂದ ಮೂಗಿಗೆ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಲ್ಲದೆ, ಆರೋಪಿ ಶ್ರೇಯಸ್ ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ಸಂತೋಷ ಕಟ್ಟಿಮನಿಯ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ನಂತರ ಸಂತೋಷ ತಪ್ಪಿಸಿಕೊಂಡು ಓಡಿಹೋಗುವಾಗ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಸಂಬAಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
