ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಶೆಟಗೇರಿ ಕ್ರಾಸ್ ಬಳಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಆಟೋರಿಕ್ಷಾಕ್ಕೆ ಹಿಂಭಾಗದಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಇಲ್ಲಿನ ಶೆಟಗೇರಿ 12ನೇ ವಾರ್ಡ್ ನಿವಾಸಿ, ಆಟೋ ಚಾಲಕ ವಿನಾಯಕ ಮಹಾದೇವ ನಾಯ್ಕ (45) ಎಂಬುವವರೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ದುರ್ದೈವಿ. ಜೂನ್ 15ರಂದು ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ವಿನಾಯಕ ಅವರು ತಮ್ಮ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೊನ್ನಾವರ ಕಡೆಯಿಂದ ಕಾರವಾರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಶೆಟಗೇರಿ ಕ್ರಾಸ್ ಬಳಿ ತಲುಪುತ್ತಿದ್ದಂತೆ, ಇವರ ಹಿಂಭಾಗದಿಂದಲೇ ಅತಿ ವೇಗವಾಗಿ ಬಂದ ಕೆ.ಎ.17/ಎಮ್.ಸಿ.-9060 ನೋಂದಣಿ ಸಂಖ್ಯೆಯ ಬ್ರೇಜಾ ಕಾರು ಆಟೋಗೆ ಜೋರಾಗಿ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ರಸ್ತೆ ಬದಿಗೆ ಸಂಪೂರ್ಣವಾಗಿ ಪಲ್ಟಿಯಾಗಿದ್ದು, ಚಾಲಕ ವಿನಾಯಕ ಅವರ ತಲೆ, ಮುಖ, ಎದೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ರಕ್ತಗಾಯಗಳಾಗಿವೆ. ಇನ್ನು ಆಟೋದಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಪಘಾತಕ್ಕೆ ಕಾರಣವಾದ ಕಾರನ್ನು ಕುಮಟಾದ ಹಂದಿಗೋಣ ನಿವಾಸಿ ಮಹಮ್ಮದ್.ಎ ತಂದೆ ಅಬ್ದುಲ್ ಖಾದರ್ (30) ಎಂಬಾತ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.
ಘಟನೆಯ ಬೆನ್ನಲ್ಲೇ ಗಾಯಾಳು ಚಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 119/2026 ರನ್ವಯ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281, 125, ಹಾಗೂ 125(ಎ) ಅಡಿಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
