ಕಾರವಾರ: ಹಾವಿನ ಕಡಿತದಿಂದ ಲೈನ್ಮೆನ್ ಒಬ್ಬರು ದುರಂತವಾಗಿ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾ ಮೊಗಟಾದ ಶಾಂತಿಕಾ ಪರಮೇಶ್ವರಿ ದೇಗುಲದ ಬಳಿ ವಾಸವಾಗಿದ್ದ ಸುರೇಶ ಗೋವಿಂದರಾಯ ನಾಯಕ (48) ಎಂಬುವವರೇ ಮೃತಪಟ್ಟ ದುರ್ದೈವಿ. ಇವರು ಕಾರವಾರದ ಕಿನ್ನರದಲ್ಲಿ ಲೈನ್ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರತಿದಿನ ರೈಲಿನ ಮೂಲಕ ಕಾರವಾರಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಸುರೇಶ ಅವರು, ಎಂದಿನಂತೆ ಜೂನ್ 20ರಂದು ಸಹ ಅಂಕೋಲಾ ರೈಲು ನಿಲ್ದಾಣದ ಕಡೆಗೆ ನಡೆದುಕೊಂಡು ಹೊರಟಿದ್ದರು. ಈ ವೇಳೆ ಅಂಕೋಲಾದ ಬೋಗದ್ದೆ ರಸ್ತೆ ಪಕ್ಕ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ಅವರಿಗೆ ನಾಗರ ಹಾವು ಕಚ್ಚಿದೆ. ಹಾವಿನ ವಿಷ ತೀವ್ರವಾಗಿ ದೇಹಕ್ಕೆ ಹರಡಿದ ಕಾರಣ ಅವರು ಸ್ಥಳದಲ್ಲೇ ತೀವ್ರವಾಗಿ ಅಸ್ವಸ್ಥಗೊಂಡು ನರಳಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರನ್ನು ರಕ್ಷಿಸಿಸಲು ಆಸ್ಪತ್ರೆಗೆ ಸಾಗಿಸಲು ಮುಂದಾದರು.
ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಸುರೇಶ ನಾಯಕ ಅವರು ಕೊನೆಯುಸಿರೆಳೆದಿದ್ದರು. ಬೆಳಿಗ್ಗೆ 10.45ರ ಸುಮಾರಿಗೆ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಆಕಸ್ಮಿಕ ಸಾವಿನ ಕುರಿತು ಮೃತರ ಚಿಕ್ಕಪ್ಪನ ಮಗನಾದ ಎಂ. ಜಿ. ಗೋಕುಲ ಗೌರೀಶ ನಾಯಕ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಶವಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
