ಕಾರವಾರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದ ನದಿವಾಡದ ಬಳಿ ಚಾಕುವಿನಿಂದ ಭೀಕರವಾಗಿ ಹಲ್ಲೆಗೊಳಗಾಗಿದ್ದ ಅಂಬೇಡ್ಕರ್ ಕಾಲೋನಿಯ ನಿವಾಸಿ ರೋಷನ್ ಪ್ರದೀಪ್ ಹುಲಸ್ವಾರ್ (21) ರವಿವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಷನ್‌ನ ಒಂದು ಕಾಲನ್ನು ವೈದ್ಯರು ಕತ್ತರಿಸಿದ್ದರು. ಆದರೆ ಚಿಕಿತ್ಸೆ ಸಫಲವಾಗದೆ ಜೂನ್ 21ರಂದು ಕೊನೆಯುಸಿರೆಳೆದಿದ್ದಾನೆ. ಆರೋಪಿ ಸಂಜಯ್ ಸತೀಶ್ ಮಾಂಗ್ರೆಕರ್ (20) ಪೊಲೀಸ್ ಬಂಧನದಲ್ಲಿದ್ದಾನೆ.
ಜೂನ್ 7 ರಂದು ರಾತ್ರಿ 9:30 ರ ಸುಮಾರಿಗೆ ಎಲೆಕ್ಟ್ರಿಷಿಯನ್ ಮತ್ತು ವೆಲ್ಡರ್ ಕೆಲಸ ಮಾಡಿಕೊಂಡಿದ್ದ ರೋಷನ್ ತನ್ನ ಸ್ನೇಹಿತ ಸಂತೋಷ್ ಜೊತೆ ದೇವಸ್ಥಾನದ ಎದುರು ನಿಂತಿದ್ದಾಗ, ಅಲ್ಲಿಗೆ ಬಂದ ಆರೋಪಿ ಸಂಜಯ್ ಮಾಂಗ್ರೆಕರ್ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಜಗಳ ತೆಗೆದಿದ್ದನು. ಮಾತು ಬೆಳೆದು ಕೋಪೋದ್ರಿಕ್ತನಾದ ಸಂಜಯ್, ತನ್ನ ಬಳಿ ಇದ್ದ ತಲ್ವಾರ್‌ನಿಂದ ರೋಷನ್ ತಲೆ ಹಾಗೂ ಕೈಗಳ ಮೇಲೆ ತೀವ್ರವಾಗಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದನು. ರೋಷನ್ ರಕ್ಷಣೆಗಾಗಿ ಜೋರಾಗಿ ಕಿರುಚಿಕೊಂಡಾಗ ಸಾರ್ವಜನಿಕರು ಓಡಿ ಬಂದಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಬಳಿಕ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರೋಷನ್‌ನನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಗಳು ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ರೋಷನ್ ಅಣ್ಣ ಪ್ರಜ್ವಲ್ ಪ್ರದೀಪ್ ಹುಲಸ್ವಾರ್ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಗಾಯಾಳು ರೋಷನ್ ಮೃತಪಟ್ಟಿರುವುದರಿಂದ ಈ ಪ್ರಕರಣವು ಕೊಲೆ ಯತ್ನದಿಂದ ಕೊಲೆ ಪ್ರಕರಣವಾಗಿ ಬದಲಾಗಲಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
