ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ!

Pakka News Web • 22 ಜೂನ್ 2026,

ಶಿರಸಿ:ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಕಳೆದ ಮೇ ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಹೊನ್ನಾವರ ತಾಲೂಕಿನ ಮಡಿ-ಮಂಕಿ ಗ್ರಾಮದ ಮೂಲದವರಾಗಿದ್ದು, ಸದ್ಯ ಶಿರಸಿಯ ಗಣೇಶನಗರದಲ್ಲಿ ವಾಸವಿದ್ದ ವೆಂಕಟೇಶ ಗೋಪಾಲ ನಾಯ್ಕ (36) ನಾಪತ್ತೆಯಾದ ದುರ್ದೈವಿ. ಇವರು ಕಳೆದ ಮೇ 26ರಂದು ಬೆಳಿಗ್ಗೆ ಮನೆಯಿಂದ ಹೋದವರು ಮರಳಿ ಬಂದಿಲ್ಲ ಎಂದು ಅವರ ಪತ್ನಿ ಶಕುಂತಲಾ ಅವರು ಶಿರಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ಅವರು, ಕುಟುಂಬದಲ್ಲಿ ಸಂಭವಿಸಿದ ವೈಯಕ್ತಿಕ ದುಃಖದ ಘಟನೆಗಳಿಂದಾಗಿ ತೀವ್ರ ಮಾನಸಿಕ ನೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಕಳೆದ ಎರಡು ವರ್ಷಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮೇ 26ರ ಬೆಳಿಗ್ಗೆ 7 ರಿಂದ ಸಂಜೆ 6:30ರ ಅವಧಿಯಲ್ಲಿ ಗಣೇಶನಗರದ ತಮ್ಮ ಬಾಡಿಗೆ ಮನೆಯಿಂದ ಹೊರಟ ಅವರು ತದನಂತರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.

ಸುಮಾರು 36 ವರ್ಷ ಪ್ರಾಯದ ವೆಂಕಟೇಶ ಅವರು ಗೋಧಿ ಮೈಬಣ್ಣ ಹಾಗೂ ದುಂಡು ಮುಖವನ್ನು ಹೊಂದಿದ್ದು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡಬಲ್ಲರು. ನಾಪತ್ತೆಯಾಗುವ ಸಮಯದಲ್ಲಿ ಅವರು ಕೆಂಪು ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕಂದು ಬಣ್ಣದ ಬ್ಯಾಗ್ ಒಂದನ್ನು ಹೆಗಲಿಗೇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಸಾರ್ವಜನಿಕರಲ್ಲಿ ವಿನಂತಿ:ಈ  ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ತಕ್ಷಣವೇ ಶಿರಸಿ ನಗರ ಪೊಲೀಸ್ ಠಾಣೆ (08384-226333 / 9480805264) ಅಥವಾ ಶಿರಸಿ ವೃತ್ತ ನಿರೀಕ್ಷಕರ ಕಚೇರಿ (08384-226260) ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಕೋರಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರು ನೀಡುವ ಸಣ್ಣ ಮಾಹಿತಿಯೂ ತನಿಖೆಗೆ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250