ಕಾರವಾರ: ನಗರದ ಅಂಬೇಡ್ಕರ್ ಕಾಲೋನಿಯ ರೋಷನ್ ಹುಲಸ್ವಾರ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಮೃತನ ತಾಯಿ ಶಕುಂತಲಾ ಹುಲಸ್ವಾರ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್‌ಸ್ಟಾಗ್ರಾಮ್ ರೀಲ್ಸ್ ಜಗಳಕ್ಕೆ ಸಂಬಂಧಿಸಿದಂತೆ ಮೂವರು ಸೇರಿ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಆದರೆ ಪೊಲೀಸರು ಕೇವಲ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ. ಬಡತನದಲ್ಲೂ ಸಾಲ-ಸೋಲ ಮಾಡಿ ₹10 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉಳಿದ ಇಬ್ಬರು ಆರೋಪಿಗಳಿಂದ ಈಗ ಮೃತನ ಸಹೋದರ ಪ್ರಜ್ವಲ್‌ಗೆ ಜೀವ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದರು.

ಮಾಜಿ ನಗರಸಭೆ ಅಧ್ಯಕ್ಷೆ ಮಾಲಾ ಹುಲಸ್ವಾರ ಮಾತನಾಡಿ, ಘಟನೆ ನಡೆದು 16 ದಿನಗಳಾದರೂ ಯಾವುದೇ ಜನಪ್ರತಿನಿಧಿಗಳು ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿಲ್ಲ. ಸರ್ಕಾರ ಈ ಬಡ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಮತ್ತು ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಂತಾರಾಮ ಹುಲಸ್ವಾರ, ದೇವಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
