ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಕಾನಸೂರು ವಸತಿ ಶಾಲೆ ವಿದ್ಯಾರ್ಥಿ ನಿಗೂಢ ಸಾವು: ಶಿಕ್ಷಕನ ಕರಾಳ ಮುಖವಾಡ ಬಯಲು!

Pakka News Web • 25 ಜೂನ್ 2026,

ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಗೋಕುಲ ಗೌಡ ಅವರ ನಿಗೂಢ ಸಾವು ಇದೀಗ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸುವಂತಹ ಭೀಕರ ತಿರುವು ಪಡೆದುಕೊಂಡಿದೆ. ಜೂನ್ 9ರಂದು ಶಾಲಾ ಆವರಣದ ಬಟ್ಟೆ ಒಣಗಿಸುವ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ 15 ವರ್ಷದ ಈ ಬಾಲಕನ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡರೂ, ಇದರ ಹಿಂದೆ ಶಿಕ್ಷಕನೊಬ್ಬನ ಅಸಭ್ಯ ವರ್ತನೆ ಹಾಗೂ ವ್ಯವಸ್ಥಿತ ಸಂಚು ಅಡಗಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಮಾನಸಿಕವಾಗಿ ಅತ್ಯಂತ ದೃಢವಾಗಿದ್ದ ಹಾಗೂ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ಗೋಕುಲ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗನಲ್ಲ ಎಂದು ನಂಬಿದ್ದ ಹೆತ್ತವರಿಗೆ, ಈಗ ಹೊರಬಿದ್ದಿರುವ ಸತ್ಯಗಳು ಮಗನದ್ದು ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ಸಂಶಯವನ್ನು ದಟ್ಟವಾಗಿಸಿದೆ.

​ಈ ನಿಗೂಢ ಸಾವಿನ ಬೆನ್ನತ್ತಿದಾಗ ಶಾಲೆಯ ಹಿಂದಿ ಶಿಕ್ಷಕ ಅಬ್ಬು ಸರ್ ಎಂಬುವವರ ಕರಾಳ ಮುಖವಾಡ ಕಳಚಿಬಿದ್ದಿದೆ. ಕೆಲವು ತಿಂಗಳ ಹಿಂದೆ ಇದೇ ಶಿಕ್ಷಕ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಶೌಚಾಲಯದ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಅಸಹ್ಯಕರ ದೃಶ್ಯವನ್ನು ಗೋಕುಲ ಕಣ್ಣಾರೆ ಕಂಡಿದ್ದನು. ತಾನು ಸಿಕ್ಕಿಬಿದ್ದ ಆತಂಕದಲ್ಲಿದ್ದ ಶಿಕ್ಷಕ ಅಬ್ಬು, ಈ ವಿಷಯವನ್ನು ಯಾರ ಮುಂದೆಯೂ ಬಾಯಿಬಿಡದಂತೆ ಗೋಕುಲನ ಕುತ್ತಿಗೆ ಹಿಡಿದು ಎತ್ತಿ ಪ್ರಾಣ ಬೆದರಿಕೆ ಹಾಕಿದ್ದನು. ಅಷ್ಟೇ ಅಲ್ಲದೆ, ಬಿಸ್ಕತ್ ತಿಂದ ಎಂಬ ಸಣ್ಣ ಕಾರಣವನ್ನು ಮುಂದಿಟ್ಟುಕೊಂಡು ಗೋಕುಲನಿಗೆ ಅಮಾನವೀಯವಾಗಿ ಥಳಿಸಲಾಗಿತ್ತು. ಏಪ್ರಿಲ್ ರಜೆಗೆ ಮನೆಗೆ ಬಂದಿದ್ದ ಗೋಕುಲ, ತನ್ನ ಕುತ್ತಿಗೆಯ ಮೇಲಾಗಿದ್ದ ಗಾಯದ ಗುರುತುಗಳನ್ನು ಕಂಡು ಆತಂಕಗೊಂಡ ತಾಯಿ ಜಯಶ್ರೀ ಗೌಡ ಅವರ ಬಳಿ ಈ ಎಲ್ಲಾ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದನು. ಇದೇ ಶಿಕ್ಷಕ ಈ ಹಿಂದೆ ಹಾರ್ಸಿಕಟ್ಟಾ ಮುರಾರ್ಜಿ ಶಾಲೆಯಲ್ಲಿದ್ದಾಗಲೂ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ವರ್ಗಾವಣೆಯಾಗಿದ್ದ ಎಂಬ ಆಘಾತಕಾರಿ ವಿಷಯವೂ ಕುಟುಂಬಕ್ಕೆ ತಿಳಿದಿತ್ತು.

​ರಜೆ ಮುಗಿಸಿ ಗೋಕುಲ ಮತ್ತೆ ಹಾಸ್ಟೇಲ್‌ಗೆ ಮರಳಿದ ಬೆನ್ನಲ್ಲೇ ಜೂನ್ 9ರಂದು ಹೆತ್ತವರ ಮೊಬೈಲ್‌ಗೆ ಶಾಲಾ ಸಿಬ್ಬಂದಿಯಿಂದ ತುರ್ತು ಕರೆ ಬಂದಿತ್ತು. ಮಗನಿಗೆ ತೀವ್ರ ಪೆಟ್ಟಾಗಿದೆ ಎಂದು ಆಸ್ಪತ್ರೆಗೆ ಕರೆಸಿಕೊಂಡ ಶಾಲಾ ಮಂಡಳಿ, ಹೆತ್ತವರು ಶಿರಸಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಿದ್ಧ ಸೂತ್ರದ ಉತ್ತರ ನೀಡಿದ್ದರು. ಮಗನ ಸಾವಿನಿಂದ ದಿಕ್ಕೆಟ್ಟ ತಾಯಿಗೆ ಮಗ ಈ ಹಿಂದೆ ಹೇಳಿದ್ದ ಮಾತುಗಳು ಹಾಗೂ ಘಟನೆ ನಡೆದ ದಿನದ ಕೆಲವು ನಿಗೂಢ ಸಂಗತಿಗಳು ಮತ್ತಷ್ಟು ಅನುಮಾನ ಹುಟ್ಟಿಸಿವೆ. ವಿಶೇಷವೆಂದರೆ, ಗೋಕುಲ ಮೃತಪಟ್ಟ ಸಮಯದಲ್ಲಿ ಇಡೀ ಕಾನಸೂರು ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿದ್ದರೂ, ಕೇವಲ ಇಂದಿರಾಗಾಂಧಿ ವಸತಿ ಶಾಲೆಯ ಹಾಸ್ಟೇಲ್‌ನಲ್ಲಿ ಮಾತ್ರ ಕರೆಂಟ್ ಇರಲಿಲ್ಲ. ತನಿಖೆಯ ದಿಕ್ಕು ತಪ್ಪಿಸಲು ಹಾಗೂ ಸಾಕ್ಷ್ಯ ನಾಶಪಡಿಸಲು ಬೇಕೆಂದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ತಾನು ಕಂಡ ಅಕ್ರಮವನ್ನು ಎಲ್ಲಿ ಜಗತ್ತಿಗೆ ಸಾರುತ್ತಾನೋ ಎಂಬ ಭಯದಿಂದಲೇ ಶಿಕ್ಷಕ ಅಬ್ಬು ಸೇರಿ ಇತರರು ಸೇರಿಕೊಂಡು ಗೋಕುಲನನ್ನು ಹತ್ಯೆ ಮಾಡಿದ್ದಾರೆ ಎಂದು ತಾಯಿ ಜಯಶ್ರೀ ಗೌಡ ಆರೋಪಿಸಿದ್ದು, ನ್ಯಾಯಕ್ಕಾಗಿ ಜೂನ್ 23ರಂದು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಮಗ್ರ ತನಿಖೆಗೆ ಮುಂದಾಗಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250