ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಅಂತರ್ ಜಿಲ್ಲಾ ಲೇಡಿ ಕಳ್ಳಿಯ ಬಂಧನ

Pakka News Web • 26 ಜೂನ್ 2026,

ಶಿರಸಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜನಜಂಗುಳಿಯನ್ನು ಬಂಡವಾಳವಾಗಿಸಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಬೆಂಗಳೂರು ಮೂಲದ ಅಂತರ್ ಜಿಲ್ಲಾ ಮಹಿಳಾ ಕಳ್ಳಿಯನ್ನು ಶಿರಸಿ ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ಸರ್ಕಾರಿ ಆಸ್ಪತ್ರೆ ಹಿಂಭಾಗದ ನಿವಾಸಿ ಜ್ಯೋತಿ @ ಸಂಜನಾ ವೆಂಕಟೇಶ ಪಸುಪುಲೇಟ್ (32) ಬಂಧಿತ ಆರೋಪಿ. ಆರೋಪಿತಳಿಂದ ಪೊಲೀಸರು 9 ಲಕ್ಷ ರೂ. ಮೌಲ್ಯದ ಸುಮಾರು 70 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಜೂನ್ 3ರಂದು ಸೊರಬ ತಾಲೂಕಿನ ಕಲಗೋಡ ನಿವಾಸಿ ಸವಿತಾ ಆನಂದ ನಾಯ್ಕ ಅವರು ಶಿರಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾಗ ಅವರ ವ್ಯಾನೆಟಿ ಬ್ಯಾಗ್‌ನ ಜಿಪ್ ತೆಗೆದು ಒಳಗಿದ್ದ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ, 50 ಸಾವಿರ ರೂ. ಮೌಲ್ಯದ ಕಿವಿಯ ಒಡವೆಗಳು, ಮೊಬೈಲ್ ಹಾಗೂ 8000 ರೂ. ನಗದು ಸೇರಿ ಒಟ್ಟು 1,59,000 ರೂ. ಮೌಲ್ಯದ ಸ್ವತ್ತುಗಳನ್ನು ಕದ್ದು ಪರಾರಿಯಾಗಿದ್ದಳು. ಈ ಬಗ್ಗೆ ಶಿರಸಿ ನಗರ ಠಾಣೆಯಲ್ಲಿ ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖೆಗೆ ನುರಿತ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ತಾಂತ್ರಿಕ ನೆರವು ಹಾಗೂ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಜೂನ್ 25ರಂದು ಆರೋಪಿತ ಜ್ಯೋತಿಯನ್ನು ಬಂಧಿಸಿದೆ. ಪೊಲೀಸರ ತೀವ್ರ ವಿಚಾರಣೆ ವೇಳೆ ಈಕೆ ಕಳೆದ ವರ್ಷ (ಸೆಪ್ಟೆಂಬರ್ 24, 2025) ಇದೇ ಶಿರಸಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಭರ್ಜರಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಇದರೊಂದಿಗೆ ಶಿರಸಿ ನಗರ ಠಾಣೆಯ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ಇಂಟರ್ ಲಿಂಕ್ ಆಗಿದ್ದು, 9 ಲಕ್ಷ ರೂ.ದ ಚಿನ್ನಾಭರಣ ಜಪ್ತಿಯಾಗಿದೆ.

ಎಸ್‌ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್ ಇ.ಸಿ. ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐಗಳಾದ ನರಸಿಂಹಲು ಟಿ., ನಾರಾಯಣ ರಾಥೋಡ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ಕಾರವಾರ ತಾಂತ್ರಿಕ ವಿಭಾಗದ ಉದಯ ಗುನಗಾ, ಬಬನ ಕದಂ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250