ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಭೂ ಅಕ್ರಮ ಹಗರಣ: ಬಂದರು ನಿರ್ಮಾಣದ ಹಿತಾಸಕ್ತಿ ಶಂಕೆ, ತನಿಖೆಗೆ ಹೆಚ್ಚಿದ ಒತ್ತಾಯ

Pakka News Web • 26 ಜೂನ್ 2026,

ಅಂಕೋಲಾದಲ್ಲಿ ದಶಕದ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನು ಮಾರಾಟ ಮಾಡಿರುವುದು ಸದ್ಯ ಹೊಸ ಸ್ವರೂಪ ಪಡೆದುಕೊಂಡಿದೆ. ಬೋಗ್ರಿಬೈಲ್ ಬಳಿ ಇತ್ತೀಚೆಗೆ ನಡೆದ ಈ ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ನಕಲಿ ವ್ಯಕ್ತಿಗಳನ್ನು ನಿಲ್ಲಿಸಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದ ತಕ್ಷಣ ದಸ್ತಾವೇಜು ರದ್ದಾಗಿದೆಯಾದರೂ, ಈವರೆಗೂ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದಿರುವುದು ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಈ ಮಹಾ ವಂಚನೆಯ ಹಿಂದೆ ಸ್ಥಳೀಯ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಸಮಗ್ರ ತನಿಖೆ ನಡೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಇಡೀ ಭೂ ಹಗರಣದ ಹಿಂದೆ ಪ್ರಸ್ತಾಪಿತ ಕೇಣಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಹಿತಾಸಕ್ತಿ ಅಡಗಿದೆ ಎಂಬ ಬಲವಾದ ಶಂಕೆ ಸ್ಥಳೀಯರಲ್ಲಿ ಮೂಡಿದೆ. ಬಂದರು ನಿರ್ಮಾಣಗೊಂಡ ನಂತರ ಸರಕು-ಸಾಮಗ್ರಿಗಳನ್ನು ದಾಸ್ತಾನು ಮಾಡಲು ಅನುಕೂಲವಾಗುವಂತೆ, ಹೊರ ಜಿಲ್ಲೆಯವರ ಹೆಸರಿನಲ್ಲಿ ವ್ಯವಸ್ಥಿತವಾಗಿ ಭೂಮಿ ಖರೀದಿಸುವ ಪ್ರಯತ್ನಗಳು ನಡೆಯುತ್ತಿವೆ. ಬಂದರು ಚಟುವಟಿಕೆಗಳನ್ನು ಚುರುಕುಗೊಳಿಸುವ ದುರುದ್ದೇಶದಿಂದಲೇ ಇಂತಹ ದೊಡ್ಡ ಮಟ್ಟದ ಭೂ ಅಕ್ರಮಗಳನ್ನು ಎಸಗಲಾಗುತ್ತಿದೆ ಎಂದು ‘ಅಂಕೋಲಾ ಸರ್ವ ಸಮಾಜಗಳ ಹಿತ ರಕ್ಷಣಾ ಒಕ್ಕೂಟ’ ಗಂಭೀರವಾಗಿ ಆರೋಪಿಸಿದೆ. ಮೃತಪಟ್ಟವರೂ ಸಹ ಸ್ವರ್ಗದಿಂದ ಬಂದು ಸಹಿ ಮಾಡಿದಂತಿರುವ ಈ ವಿಲಕ್ಷಣ ವಂಚನೆಯ ವಿರುದ್ಧ ಒಕ್ಕೂಟವು ಈಗಾಗಲೇ ತಹಶೀಲ್ದಾರ್ ಕಚೇರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಆಡಳಿತ ಮಂಡಳಿಯ ಮೌನವು ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದೆ.

ಇದರ ಬೆನ್ನಲ್ಲೇ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಗ್ರಿಬೈಲ್, ಶಿರಕುಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟಾಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತನಿಖೆಗೆ ಆಗ್ರಹಿಸಿ ಮತ್ತೊಂದು ಪತ್ರ ನೀಡಿದ್ದಾರೆ. ಶಿವಮೊಗ್ಗ ಮೂಲದ ಶಿವಕುಮಾರ್ ಎಂಬುವವರಿಗೆ ಮಾರಾಟವಾಗಿರುವ ಜಮೀನಿನ ಹಗರಣದ ಹಿಂದೆ ಯಾರಿದ್ದಾರೆ, ಮೃತಪಟ್ಟವರ ಹೆಸರಿನಲ್ಲಿದ್ದ ಭೂಮಿಯನ್ನು ಮಾರಾಟ ಮಾಡಿದ ನಕಲಿ ವ್ಯಕ್ತಿಗಳು ಮತ್ತು ಅವರ ಹಿಂದಿರುವ ಸೂತ್ರಧಾರಿಗಳು ಯಾರು ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಿಂದೆ ಪ್ರಭಾವಿಗಳ ಬೆಂಬಲದಿಂದ ಇಂತಹ ಅನೇಕ ಅಕ್ರಮ ನೋಂದಣಿಗಳು ನಡೆದಿರುವ ಸಾಧ್ಯತೆಯಿದ್ದು, ಈ ಹಿಂದಿನ ಎಲ್ಲಾ ಪ್ರಕರಣಗಳ ಬಗ್ಗೆಯೂ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250