ಶಿರಸಿ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಿಂದ ಮಹಿಳೆಯೊಬ್ಬರು ಗಡಿಬಿಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಸಿ ತಾಲೂಕಿನ ಇಸಳೂರು ಬಳಿ ಸಂಭವಿಸಿದೆ. ಗಾಯಗೊಂಡ ಮಹಿಳೆ ಹಾವೇರಿ ಮೂಲದ ಪ್ರಯಾಣಿಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಹಾವೇರಿ-ಶಿರಸಿ-ಹಾವೇರಿ ಮಾರ್ಗದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆ, ತುರ್ತು ಅಗತ್ಯಗಳಿಗಾಗಿ ಬಸ್ ನಿಲ್ಲಿಸುವಂತೆ ನಿರ್ವಾಹಕರಿಗೆ ತಿಳಿಸಿದ್ದರು. ಮಹಿಳೆಯ ಮನವಿಯ ಮೇರೆಗೆ ಚಾಲಕ ಬಸ್ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗಲೇ, ಅವರು ಗಾಬರಿಯಿಂದ ಚಲಿಸುತ್ತಿದ್ದ ಬಸ್‌ನಿಂದಲೇ ಕೆಳಗೆ ಜಿಗಿದಿದ್ದಾರೆ ಎನ್ನಲಾಗಿದೆ. ಬಸ್‌ನಿಂದ ಅತ್ಯಂತ ರಭಸವಾಗಿ ಕೆಳಗೆ ಬಿದ್ದ ಕಾರಣ ಮಹಿಳೆಯ ತಲೆಗೆ ಬಲವಾದ ಪೆಟ್ಟು ಬಿದ್ದು, ಗಂಭೀರ ಗಾಯಗಳಾಗಿವೆ.
ಘಟನೆಯ ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ತಕ್ಷಣವೇ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತಾದರೂ, ಅದು ಬರುವುದು ವಿಳಂಬವಾಯಿತು. ಈ ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಿದ ಸ್ಥಳೀಯ ಯುವಕರು, ತುರ್ತು ಚಿಕಿತ್ಸೆಗಾಗಿ ಅದೇ ಬಸ್‌ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
