ಭಟ್ಕಳ:ಇಲ್ಲಿನ ಬಂದರ ರಸ್ತೆಯಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಜರಂಗದಳದ ಸಕ್ರಿಯ ಕಾರ್ಯಕರ್ತರಾಗಿದ್ದ ಯುವಕನೊಬ್ಬ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಲೂಕಿನಾದ್ಯಂತ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ಬಂದರ ರಸ್ತೆಯ ಎರಡನೇ ಕ್ರಾಸ್ ಸಮೀಪ ಮಧ್ಯರಾತ್ರಿ ಸುಮಾರು ಹನ್ನಕ್ಕ ಮುಕ್ಕಾಲು ಗಂಟೆಯ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ಸಂಶುದ್ದೀನ್ ವೃತ್ತದ ಕಡೆಯಿಂದ ಬಂದರ ರಸ್ತೆಯತ್ತ ಇಬ್ಬರು ಯುವಕರು ತೆರಳುತ್ತಿದ್ದ ವೇಳೆ, ವೇಗವಾಗಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬೈಕ್ನಲ್ಲಿದ್ದ ಇಬ್ಬರೂ ರಸ್ತೆಗೆ ಸಿಡಿದು ಬಿದ್ದಿದ್ದಾರೆ. ಈ ಪೈಕಿ ಹಿಂಬದಿ ಸವಾರನಾಗಿದ್ದ ಸಬ್ಬತ್ತಿ ನಿವಾಸಿ, 24 ವರ್ಷದ ಭಜರಂಗದಳದ ಮುಂಚೂಣಿ ಕಾರ್ಯಕರ್ತ ಮಧುರ ಮಂಜುನಾಥ ನಾಯ್ಕ ಅವರ ಎದೆ, ಸೊಂಟ ಹಾಗೂ ಕೈ ಭಾಗಗಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಗರಡಿಹಿತ್ಲು-ಬೆಳಕೆ ನಿವಾಸಿ ಸುಮೇದ ನಾರಾಯಣ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೃತ ಮಧುರ ನಾಯ್ಕ ಅವರು ಭಜರಂಗದಳದ ಸಕ್ರಿಯ ಕಾರ್ಯಕರ್ತರಾಗಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಕಾರಣ, ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಟ್ಕಳದ ಸರ್ಕಾರಿ ಆಸ್ಪತ್ರೆಯ ಎದುರು ಜಮಾಯಿಸಿದ್ದರು. ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದ ಬಡ ಕುಟುಂಬಕ್ಕೆ ಮಧುರ ಅವರೇ ಪ್ರಮುಖ ಆಧಾರವಾಗಿದ್ದರ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
