ಮುಂಡಗೋಡ:ತಾಲೂಕಿನ ಜೋಗೇಶ್ವರ ಹಳ್ಳದ ಗೌಳಿ ದಡ್ಡಿಯಲ್ಲಿ ಭಾನುವಾರ ಸಂಜೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ 26 ವರ್ಷದ ಜಾನು ಕೊಕರೆ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಯುವಕ ಸ್ಥಳೀಯ ದೇವಸ್ಥಾನದ ಅರ್ಚಕರಾಗಿದ್ದು, ಸೋಮವಾರ ನಡೆಯಲಿದ್ದ ಹುಣ್ಣಿಮೆ ಪೂಜೆಗೆ ಹೂವು ಕೀಳಲು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಬಳಿ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹೂವು ಸಂಗ್ರಹಿಸುವ ಧಾವಂತದಲ್ಲಿದ್ದ ಯುವಕನಿಗೆ ಅಲ್ಲಿ ಹರಿದಾಡುತ್ತಿದ್ದ ವಿದ್ಯುತ್ ತಂತಿ ತಗುಲಿದ್ದು, ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕರುಣಾಜನಕ ಘಟನೆಯಿಂದಾಗಿ ಸದ್ಯ ಜೋಗೇಶ್ವರ ಗೌಳಿ ದಡ್ಡಿಯಲ್ಲಿ ಶೋಕ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಾಲೆಯ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕದ (ಟಿಸಿ) ಲೈನ್ ಸಮೀಪದ ತಂತಿ ಬೇಲಿಗೆ ತಾಗಿಕೊಂಡಿರುವುದೇ ಈ ಅವಘಡಕ್ಕೆ ನೇರ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳ ಓಡಾಟವಿರುವ ಶಾಲಾ ಆವರಣದ ಬಳಿಯೇ ಇಂತಹ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ಶಾಲಾ ಸಮಯದಲ್ಲಿ ಈ ದುರಂತ ನಡೆದಿದ್ದರೆ ಇನ್ನು ಹೆಚ್ಚಿನ ಪ್ರಾಣಾಪಾಯವಾಗುವ ಸಾಧ್ಯತೆಯಿತ್ತು ಎಂದು ಕಳವಳ ವ್ಯಕ್ತಪಡಿಸಿರುವ ಸಾರ್ವಜನಿಕರು, ವಿದ್ಯುತ್ ಇಲಾಖೆಯು ತಕ್ಷಣವೇ ಇಡೀ ಗ್ರಾಮದ ಅಪಾಯಕಾರಿ ತಂತಿಗಳನ್ನು ದುರಸ್ತಿಗೊಳಿಸಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
