ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಮೀಟರ್ ಬಡ್ಡಿ ದಂಧೆಕೋರರ ಮತ್ತು ರೌಡಿಗಳ ಸದ್ದಡಗಿಸಲು ಪೊಲೀಸ್ ಇಲಾಖೆ ‘ಆಪರೇಷನ್ ಕ್ಲೀನ್’ ಆರಂಭಿಸಿದಂತಿದೆ.

ಸಾರ್ವಜನಿಕರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ, ಕಾನೂನಿಗೆ ಸವಾಲಾಗಿದ್ದ ಮುಂಡಗೋಡಿನ ಇಬ್ಬರು ರೌಡಿಶೀಟರ್ಗಳಿಗೆ ಈಗ ಸ್ವಜಿಲ್ಲೆಯ ಗಡಿಯೇ ಬಂದ್ ಆಗಿದೆ. ಕೊಲೆ ಹಾಗೂ ಮೀಟರ್ ಬಡ್ಡಿ ವ್ಯವಹಾರದಂತಹ ಗಂಭೀರ ಆರೋಪ ಹೊತ್ತಿದ್ದ ಮಂಜು ನವಲೆ ಮತ್ತು ಮಧು ಸಿಂಗ್ ವಿರುದ್ಧ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಗಡಿಪಾರು ಅಸ್ತ್ರ ಪ್ರಯೋಗಿಸುವ ಮೂಲಕ ಇಬ್ಬರ ಆಟಕ್ಕೂ ಬ್ರೇಕ್ ಹಾಕಿದ್ದಾರೆ.

ಈ ಖಡಕ್ ಆದೇಶದ ಪ್ರಕಾರ, ಮಂಜು ನವಲೆ ಇನ್ಮುಂದೆ ಕೋಲಾರದ ಕೆಜಿಎಫ್ನಲ್ಲಿ ಹಾಗೂ ಮಧು ಸಿಂಗ್ ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಆರು ತಿಂಗಳ ಕಾಲ ದಿನ ತಳ್ಳಬೇಕಾಗಿದೆ. ಅಲ್ಲಿಯವರೆಗೆ ಇವರಿಗೆ ಉತ್ತರ ಕನ್ನಡ ಜಿಲ್ಲೆಯೊಳಗೆ ಪ್ರವೇಶಿಸಲು ಯಾವುದೇ ಅವಕಾಶವಿರುವುದಿಲ್ಲ.

ಜಿಲ್ಲೆಯಲ್ಲಿ ಇನ್ನು ಮುಂದೆ ಯಾರಾದರೂ ಸಾರ್ವಜನಿಕರಿಗೆ ಬೆದರಿಕೆ ಹಾಕಿದರೆ ಅಥವಾ ಮೀಟರ್ ಬಡ್ಡಿ ದಂಧೆ ನಡೆಸಿ ಜನಸಾಮಾನ್ಯರನ್ನು ಪೀಡಿಸಿದರೆ ಅವರಿಗೂ ಇದೇ ಗತಿ ಕಾಯ್ದಿದೆ ಎಂಬ ನೇರ ಸಂದೇಶವನ್ನು ಈ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ರವಾನಿಸಿದೆ.
