ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಪ್ರವಾಸಿಗರ ಬೇಜವಾಬ್ದಾರಿತನ ಮತ್ತು ಅಪಾಯಕಾರಿ ಸಾಹಸಗಳು ಮಿತಿಮೀರುತ್ತಿವೆ. ಜಗತ್ಪ್ರಸಿದ್ಧ ಜೋಗ ಜಲಪಾತದ ಅತ್ಯಂತ ಅಪಾಯಕಾರಿ ಹಾಗೂ ನಿರ್ಬಂಧಿತ ಪ್ರದೇಶವಾದ ‘ರಾಜಾ ಫಾಲ್ಸ್’ ಬಳಿ ಅಕ್ರಮವಾಗಿ ನುಗ್ಗಿ, ನಿಯಮ ಉಲ್ಲಂಘಿಸಿದ ಯೂಟ್ಯೂಬರ್ ಸೇರಿದಂತೆ ಮೂವರು ಯುವಕರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಜೋಗಿನಕೊಪ್ಪ ಮೂಲದ ಮೋಹನ ಶುಭಕರ ಗೌಡ (26), ಭರತ ಗೌಡ (27) ಮತ್ತು ಮದನ ಗೌಡ ಎಂಬುವವರೇ ಪೊಲೀಸರ ಅತಿಥಿಯಾದ ಕಾನೂನು ಉಲ್ಲಂಘಕರು.
ನಿಯಮ ಗಾಳಿಗೆ ತೂರಿ ರೀಲ್ಸ್ ಕ್ರೇಜ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಸಿದ್ದಾಪುರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ರಾಜಾ ಫಾಲ್ಸ್‌ನ ಕಲ್ಲುಬಂಡೆಗಳು ಮಳೆಯ ಕಾರಣದಿಂದಾಗಿ ತೀವ್ರ ಜಾರುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಈ ಯುವಕರು ಯಾವುದೇ ಸುರಕ್ಷತಾ ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ನಿಷೇಧಿತ ವಲಯವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ.
ಅಷ್ಟಕ್ಕೇ ನಿಲ್ಲದೆ, ಪ್ರಪಾತದ ತುದಿಯಲ್ಲಿರುವ ಕಲ್ಲುಬಂಡೆಗಳ ಮೇಲೆ ನಿಂತು ಜೀವದ ಹಂಗು ತೊರೆದು ಚಿತ್ರೀಕರಣ ಮಾಡಿದ್ದಾರೆ. ತಾವಷ್ಟೇ ಅಲ್ಲದೆ, ಜೋಗಕ್ಕೆ ಬರುವ ಇತರ ಪ್ರವಾಸಿಗರಿಗೂ ಸಹ ಇದೇ ರೀತಿ ಅಪಾಯಕಾರಿ ಜಾಗಕ್ಕೆ ಬರುವಂತೆ ಪ್ರೋತ್ಸಾಹಿಸುವ ಮಾತುಗಳನ್ನು ಆಡಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಪ್ರವಾಸಿಗರ ಸುರಕ್ಷತೆಗಾಗಿ ಪೊಲೀಸರ ಬಿಗಿ ಕ್ರಮ
ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸಿದ್ದಾಪುರ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಜೋಗ ಜಲಪಾತದ ಸೌಂದರ್ಯ ಸವಿಯಲು ಬರುವ ಇತರ ಪ್ರವಾಸಿಗರು ಇಂತಹ ವಿಡಿಯೋಗಳಿಂದ ಪ್ರೇರಿತರಾಗಿ ನಿಷೇಧಿತ ವಲಯಕ್ಕೆ ನುಗ್ಗಿ ಪ್ರಾಣಾಪಾಯ ತಂದುಕೊಳ್ಳಬಾರದು ಎಂಬ ಮುನ್ನೆಚ್ಚರಿಕೆಯಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪ್ರಕೃತಿಯ ಸೌಂದರ್ಯವನ್ನು ದೂರದಿಂದಲೇ ಆಸ್ವಾದಿಸಬೇಕೇ ಹೊರತು, ಪ್ರಾಣವನ್ನು ಪಣಕ್ಕಿಟ್ಟು ಇಂತಹ ಹುಚ್ಚಾಟಗಳನ್ನು ಆಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.
