ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

International

ಕುಳಗಿಯಲ್ಲಿ ದ್ವಿಚಕ್ರ ವಾಹನಕ್ಕೆ ಎಮ್ಮೆ ಡಿಕ್ಕಿ: ಅಂಚೆ ಇಲಾಖೆ ಉದ್ಯೋಗಿ ಸಾವು

Pakka News Web • 18 ಜೂನ್ 2026,

ದಾಂಡೇಲಿ: ಇಲ್ಲಿನ ತಾಲೂಕಿನ ಕುಳಗಿ ಬಳಿ ಬುಧವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ನಿವಾಸಿಯಾದ ಉಮೇಶ್ ಭಟ್ (೫೯) ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಅಂಬಿಕಾನಗರದ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು.

ಬುಧವಾರ ಸಂಜೆ ಉಮೇಶ್ ಭಟ್ ಅವರು ತಮ್ಮ ಕರ್ತವ್ಯ ಮುಗಿಸಿ ಅಂಬಿಕಾನಗರದಿಂದ ದಾಂಡೇಲಿಯ ಜನತಾ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕುಳಗಿಯ ಕನ್ನಡ ಶಾಲೆಯ ಬಳಿ ತಲುಪಿದಾಗ ಏಕಾಏಕಿ ರಸ್ತೆಗೆ ಓಡಿಬಂದ ಎಮ್ಮೆಯೊಂದು ಇವರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಉಮೇಶ್ ಭಟ್ ಅವರ ತಲೆ ಹಾಗೂ ದೇಹಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.

ಕೂಡಲೇ ಅವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ (SDM) ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಉಮೇಶ್ ಭಟ್ ಅವರು ಇನ್ನೇನು ಕೆಲವೇ ತಿಂಗಳುಗಳಲ್ಲಿ ಅಂದರೆ ೨೦೨೭ರ ಏಪ್ರಿಲ್ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಬೇಕಿತ್ತು. ಅಷ್ಟರಲ್ಲೇ ಸಂಭವಿಸಿದ ಈ ಆಕಸ್ಮಿಕ ದುರಂತ ಅವರ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250