ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Sports-Cinema

ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ?: ಯುವ ಪ್ರತಿಭೆಗಳಿಗೆ ಕಾದಿದೆ ಅವಕಾಶ!

Pakka News Web • 22 ಆಗಸ್ಟ್ 2026,

ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ? ದೊಡ್ಡ ಮೈದಾನದಲ್ಲಿ, ಪ್ರತಿಷ್ಠಿತ ಕ್ಲಬ್ಗಳ ಪರ ಚೆಂಡು ತಳ್ಳಿ ಮಿಂಚುವ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಉತ್ತರ ಕನ್ನಡದ ಯುವ ಫುಟ್ಬಾಲ್ ಕಲಿಗಳಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದೀಗ ಸುವರ್ಣಾವಕಾಶ ಒದಗಿಬಂದಿದೆ. ಕಾರವಾರದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ, ಯುವ ಪ್ರತಿಭೆಗಳನ್ನು ಹುಡುಕಿ ವೃತ್ತಿಪರ ಅಂಗಳಕ್ಕೆ ಕೊಂಡೊಯ್ಯುವ ಬೃಹತ್ ‘ಟೈಗರ್ ಐಕೆಎಫ್ ನಮ್ಮ ಕರ್ನಾಟಕ ಫುಟ್ಬಾಲ್ ಟ್ರಯಲ್ಸ್’ ಆರಂಭವಾಗುತ್ತಿದೆ.


ರಾಜ್ಯದ ಮೂಲೆಮೂಲೆಯ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (KSFA) ಹಾಗೂ ನಗರದ ಬೋಲ್ಡ್ ಅಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಈ ಐತಿಹಾಸಿಕ ಹೆಜ್ಜೆಯನ್ನಿಟ್ಟಿವೆ. ಈವರೆಗೆ ಕೇವಲ ಬೆಂಗಳೂರಿನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಸ್ಕೌಟಿಂಗ್ ಮತ್ತು ಆಯ್ಕೆ ಪ್ರಕ್ರಿಯೆ ಇದೀಗ ನೇರವಾಗಿ ಕರಾವಳಿಯ ಅಂಗಳಕ್ಕೇ ಬಂದಿಳಿದಿದೆ.
ಬೆಂಗಳೂರು ಎಫ್ಸಿ, ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು, ರೆಬೆಲ್ಸ್ ಎಫ್ಸಿ, ರಷ್ ಅಕಾಡೆಮಿ, ಕೆಂಪ್ಸ್ ಎಫ್ಸಿ ಹಾಗೂ ದಿ ಸ್ಪೋರ್ಟ್ಸ್ ಸ್ಕೂಲ್ನಂತಹ ದೇಶದ ದಿಗ್ಗಜ ಕ್ಲಬ್ಗಳು ಮತ್ತು ತರಬೇತಿ ಅಕಾಡೆಮಿಗಳ ಕಣ್ಣು ಈ ಬಾರಿ ಕಾರವಾರದ ಕ್ರೀಡಾಪಟುಗಳ ಮೇಲಿರಲಿದೆ. ಇಲ್ಲಿ ತಮ್ಮ ಕೌಶಲ ಪ್ರದರ್ಶಿಸಿ ಗಮನ ಸೆಳೆಯುವ ಬಾಲಕ-ಬಾಲಕಿಯರಿಗೆ ಉನ್ನತ ಗುಣಮಟ್ಟದ ತರಬೇತಿ, ಪರಿಣಿತ ಮಾರ್ಗದರ್ಶನ ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ವೃತ್ತಿಪರ ಆಟಗಾರರಾಗಿ ಬೆಳೆಯುವ ಬಾಗಿಲು ತೆರೆಯಲಿದೆ.
ಸೆಪ್ಟೆಂಬರ್ 6ರಂದು ಮಾಲಾದೇವಿ ಮೈದಾನದಲ್ಲಿ ಟ್ರಯಲ್ಸ್ ಕಣ ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಮಾಲಾದೇವಿ ಮೈದಾನದಲ್ಲಿ ಸೆಪ್ಟೆಂಬರ್ 6ರಂದು ಈ ಮಹತ್ವದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 2009ರಿಂದ 2016ರ ಅವಧಿಯಲ್ಲಿ ಜನಿಸಿದ ಬಾಲಕ ಹಾಗೂ ಬಾಲಕಿಯರು ಈ ಟ್ರಯಲ್ಸ್ನಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಅರ್ಹರಾಗಿದ್ದಾರೆ. ಗ್ರಾಮೀಣ ಹಾಗೂ ಸ್ಥಳೀಯ ಭಾಗದ ಪ್ರತಿಯೊಬ್ಬ ಆಟಗಾರನೂ ಈ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ದೊಡ್ಡ ಮಟ್ಟದ ಕ್ರೀಡಾ ಬದುಕಿಗೆ ಅಡಿಪಾಯ ಹಾಕಿಕೊಳ್ಳಲು ಇದೊಂದು ಅಪರೂಪದ ಮುನ್ನುಡಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಪಿ.ವಿ. ಪ್ರಜಿತ್, ಉಪಾಧ್ಯಕ್ಷ ಲಿಯೋ ಲೇವಿಸ್, ಆಂಟನಿ ಡಿ’ಕೋಸ್ಟಾ, ಇಂಡಿಯಾ ಖೇಲೋ ಫುಟ್ಬಾಲ್ನ ಯಧುಕೃಷ್ಣನ್ ವಿ. ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ, ಯುವ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿದು ತಮ್ಮ ಕೌಶಲ್ಯವನ್ನು ಪ್ರದರ್ಶಿಸುವಂತೆ ಕರೆ ನೀಡಿದ್ದಾರೆ. ಬೂಟ್ಸ್ ಕಟ್ಟಿ, ಕಣಕ್ಕಿಳಿಯಿರಿ; ನಿಮ್ಮ ಫುಟ್ಬಾಲ್ ಪಯಣದ ಹೊಸ ಅಧ್ಯಾಯ ಕಾರವಾರದಿಂದಲೇ ಆರಂಭವಾಗಲಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250