ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ನೀವು ಗೃಹಲಕ್ಷ್ಮಿ ಫಲಾನುಭವಿಯೇ? ಹಾಗಿದ್ದರೆ ಈ ಸುದ್ದಿ ಓದಿ!

Pakka News Web • 23 ಸೆಪ್ಟೆಂ 2026,

ಪತಿ–ಪತ್ನಿಯ ಆಧಾರ್, ಬ್ಯಾಂಕ್ ಖಾತೆ ಸೇರಿ ಹಲವು ದಾಖಲೆಗಳ ಪರಿಶೀಲನೆ; ಮನೆಮನೆ ಸಮೀಕ್ಷೆಗೆ ಸಿದ್ಧತೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಅರ್ಹತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಯೋಜನೆಯ ಸೌಲಭ್ಯ ನೈಜ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಮುಂದುವರಿಸುವ ಉದ್ದೇಶದಿಂದ ದಾಖಲೆಗಳ ಪರಿಶೀಲನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ವ್ಯವಸ್ಥೆಯಂತೆ ಮನೆಯ ಯಜಮಾನಿಯ ಆಧಾರ್ ಜೊತೆಗೆ ಯಜಮಾನನ (ಪತಿ)ಆಧಾರ್ ವಿವರಗಳನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಫಲಾನುಭವಿಯ ಹೆಸರು ಹಾಗೂ ವಿಳಾಸ ಆಧಾರ್ ದಾಖಲೆಯಲ್ಲಿರುವ ಮಾಹಿತಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಜೊತೆಗೆ ಬ್ಯಾಂಕ್ ಖಾತೆಯ ವಿವರಗಳನ್ನೂ ಪರಿಶೀಲಿಸಲಾಗುತ್ತಿದ್ದು, ಯೋಜನೆಯ ಹಣ ಜಮೆಯಾಗುವ ಖಾತೆಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ದೃಢೀಕರಿಸುವ ಕ್ರಮ ಕೈಗೊಳ್ಳಲಾಗುತ್ತದೆ.

ಪಡಿತರ ಚೀಟಿ, ಆಧಾರ್ ಹಾಗೂ ಬ್ಯಾಂಕ್ ಖಾತೆಯಲ್ಲಿನ ಮಾಹಿತಿಯನ್ನು ಪರಸ್ಪರ ಪರಿಶೀಲಿಸುವುದರ ಜತೆಗೆ ಬಯೋಮೆಟ್ರಿಕ್ ಅಥವಾ ಫೇಶಿಯಲ್ ದೃಢೀಕರಣಕ್ಕೂ ಆದ್ಯತೆ ನೀಡಲಾಗುತ್ತಿದೆ. ಫಲಾನುಭವಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆಮನೆ ಸಮೀಕ್ಷೆ ನಡೆಸುವ ಉದ್ದೇಶವಿದ್ದು, ಇದಕ್ಕಾಗಿ ಗಣತಿದಾರರನ್ನು ನಿಯೋಜಿಸುವ ಸಿದ್ಧತೆ ನಡೆದಿದೆ.

ಮರುಪರಿಶೀಲನೆಗಾಗಿ 17 ಅಂಶಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆಯನ್ನೂ ಸಿದ್ಧಪಡಿಸಲಾಗಿದೆ. ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ, ದಾಖಲೆಗಳೊಂದಿಗೆ ಹೊಂದಾಣಿಕೆ ಪರಿಶೀಲಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅರ್ಹತೆ ಹೊಂದಿರುವ ಫಲಾನುಭವಿಗಳ ವಿವರಗಳನ್ನು ದೃಢೀಕರಿಸುವುದರ ಜತೆಗೆ, ನಿಯಮಾನುಸಾರ ಅರ್ಹತೆ ಇಲ್ಲದಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ.

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನಾ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅವರ ಅನುಮೋದನೆಯ ನಂತರ ಹೊಸ ಮಾರ್ಗಸೂಚಿಯನ್ವಯ ಮುಂದಿನ ಹಂತದ ಪ್ರಕ್ರಿಯೆ ಆರಂಭವಾಗಲಿದೆ.

ಈ ಮರುಪರಿಶೀಲನೆಯ ಮೂಲಕ ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರ ದಾಖಲೆಗಳು, ಕುಟುಂಬದ ವಿವರಗಳು ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಮುಂದುವರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250