ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ಬೇಡ್ತಿ–ಅಘನಾಶಿನಿ ನದಿ ಸಂರಕ್ಷಣೆಗೆ ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಧರಣಿ

Pakka News Web • 8 ಆಕ್ಟೋ 2026,

ನದಿ ತಿರುವು–ಜೋಡಣೆ ಯೋಜನೆಗಳಿಗೆ ವಿರೋಧ; ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಹೋರಾಟಕ್ಕೆ ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು

ಬೇಡ್ತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಗಳ ನೈಸರ್ಗಿಕ ಹರಿವು ಮತ್ತು ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗೆ ಆಗ್ರಹಿಸಿ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಯಲಿದೆ.

ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯಲಿರುವ ಧರಣಿಗೆ ಉತ್ತರ ಕನ್ನಡ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ರೈತರು, ಸ್ಥಳೀಯರು, ಪರಿಸರ ಹೋರಾಟಗಾರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯವರು ಭಾಗವಹಿಸುವ ನಿರೀಕ್ಷೆಯಿದೆ.

ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ಸೇರಿದಂತೆ ನದಿ ತಿರುವು ಮತ್ತು ಜೋಡಣೆ ಯೋಜನೆಗಳಿಂದ ಪಶ್ಚಿಮಘಟ್ಟದ ಪರಿಸರ ವ್ಯವಸ್ಥೆ ಹಾಗೂ ನದಿ ಕಣಿವೆಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂಬುದು ಹೋರಾಟಗಾರರ ಪ್ರಮುಖ ಆಕ್ಷೇಪವಾಗಿದೆ. ನದಿಗಳ ನೈಸರ್ಗಿಕ ಹರಿವಿನಲ್ಲಿ ಬದಲಾವಣೆ ಮಾಡಿದರೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಜೀವವೈವಿಧ್ಯ ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನದಿಗಳು ಕೇವಲ ನೀರಿನ ಮೂಲಗಳಲ್ಲ. ಅವುಗಳೊಂದಿಗೆ ಅರಣ್ಯ, ಕೃಷಿ, ಕರಾವಳಿ ಪರಿಸರ, ಜೀವವೈವಿಧ್ಯ ಮತ್ತು ಸಾವಿರಾರು ಕುಟುಂಬಗಳ ಬದುಕು ನೇರವಾಗಿ ಬೆಸೆದುಕೊಂಡಿದೆ. ಹೀಗಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಪರಿಸರದ ಮೇಲೆ ಆಗುವ ಪರಿಣಾಮ ಹಾಗೂ ಸ್ಥಳೀಯ ಜನರ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂದು ಸಂಘಟಕರು ಒತ್ತಾಯಿಸಿದ್ದಾರೆ.

ಧರಣಿಗೆ ಪರಿಸರ ತಜ್ಞರು, ಸಾಮಾಜಿಕ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ, ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿವಿಧ ರೈತ, ಮಹಿಳಾ, ಕಾರ್ಮಿಕ, ಯುವ ಹಾಗೂ ಪರಿಸರ ಸಂಘಟನೆಗಳ ಬೆಂಬಲ ಪಡೆಯುವ ಪ್ರಯತ್ನವೂ ನಡೆದಿದೆ.

ಸೆಪ್ಟೆಂಬರ್ 22 ಮತ್ತು 23ರಂದು ಬೆಂಗಳೂರಿನಲ್ಲಿ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಸಭೆ ನಡೆಸಿ ಧರಣಿಯ ಸಿದ್ಧತೆ ಕುರಿತು ಚರ್ಚಿಸಿದ್ದು, ಸಂಪರ್ಕ ಅಭಿಯಾನ ಮತ್ತು ಸಂಚಾಲನಾ ಸಮಿತಿ ರಚನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯ ಸಂಚಾಲಕ ರಮೇಶ್ ಭಟ್ ತಿಳಿಸಿದ್ದಾರೆ. ಸ್ವರ್ಣವಲ್ಲೀ ಶ್ರೀಗಳು ಹಾಗೂ ನೆಲೆಮಾವು ಮಠದ ಪ್ರಮುಖರೂ ಹೋರಾಟಕ್ಕೆ ಬೆಂಬಲ ಸೂಚಿಸಿ ಕರೆ ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬೆಂಗಳೂರಿಗೆ ಕರೆತರುವ ಸಿದ್ಧತೆ ನಡೆದಿದೆ ಎನ್ನಲಾಗಿದ್ದು, ಪ್ರಯಾಣಕ್ಕೆ ಸಂಬಂಧಿಸಿದಂತೆ ತಾಲೂಕುವಾರು ಬಸ್‌ಗಳ ಸಂಖ್ಯೆ, ಹೊರಡುವ ಸಮಯ ಹಾಗೂ ಸಂಪರ್ಕ ವಿವರಗಳನ್ನು ಸಂಘಟಕರು ಇನ್ನಷ್ಟೇ ಪ್ರಕಟಿಸಬೇಕಿದೆ.

ಅಕ್ಟೋಬರ್ 10ರಂದು ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಧರಣಿ, ಬೇಡ್ತಿ–ಅಘನಾಶಿನಿ–ಗಂಗಾವಳಿ ನದಿಗಳ ಸಂರಕ್ಷಣೆ ಮತ್ತು ನದಿ ತಿರುವು ಯೋಜನೆಗಳ ಕುರಿತ ಚರ್ಚೆಯನ್ನು ರಾಜ್ಯಮಟ್ಟದಲ್ಲಿ ಮುನ್ನೆಲೆಗೆ ತರುವ ಉದ್ದೇಶ ಹೊಂದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250