ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ರಾಜ್ಯ ದಿವಾಳಿಯಾಗಿದೆ ಎನ್ನುವ ಚಂದ್ರಶೇಖರ್ ಮೊದಲು ಕೇಂದ್ರದ ವೈಫಲ್ಯಗಳಿಗೆ ಉತ್ತರಿಸಲಿ: ಸೂರಜ್ ನಾಯ್ಕ್ ವಾಗ್ದಾಳಿ

Pakka News Web • 26 ಜೂನ್ 2026,

ಕಾರವಾರ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ದಿವಾಳಿಯಾಗಿದೆ ಎಂದು ಬಿಜೆಪಿ ನಾಯಕ ಎಚ್. ಎನ್. ಚಂದ್ರಶೇಖರ್ ನೀಡಿರುವ ಹೇಳಿಕೆ ಹಾಸ್ಯಾಸ್ಪದ ಹಾಗೂ ಸತ್ಯಕ್ಕೆ ದೂರವಾಗಿದ್ದು, ಇದು ಜನರ ಗಮನವನ್ನು ಬೇರೆಡೆ ಸೆಳೆಯುವ ರಾಜಕೀಯ ಗಿಮಿಕ್ ಎಂದು ಕಾಂಗ್ರೆಸ್ ಸೇವಾದಳದ ಸಾಮಾಜಿಕ ಜಾಲತಾಣ ಮತ್ತು ಪ್ರಚಾರ ಸಮಿತಿಯ ರಾಷ್ಟ್ರೀಯ ಸಂಯೋಜಕರಾದ ಸೂರಜ್ ಜಿ ನಾಯ್ಕ ಪ್ರತಿಕ್ರಿಯೇ ನೀಡಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ರಾಜ್ಯ ಸರ್ಕಾರದ ವಿರುದ್ಧ ಬೆರಳು ತೋರಿಸುವ ಮುನ್ನ, ಕಳೆದ 12 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ತಂದಿಟ್ಟಿರುವ ಆರ್ಥಿಕ ಮತ್ತು ಸಾಮಾಜಿಕ ದುಸ್ಥಿತಿಯ ಬಗ್ಗೆ ಚಂದ್ರಶೇಖರ್ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ ಎಂದು ಅವರು ತಿರುಗೇಟು ನೀಡಿದ್ದಾರೆ.

ಇಂದು ದೇಶದ ಜನರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಉತ್ತರವಿಲ್ಲದ ನೂರಾರು ಪ್ರಶ್ನೆಗಳು ಕೇಂದ್ರದ ಮುಂದಿವೆ. ದೇಶಾದ್ಯಂತ ಸಂಚಲನ ಮೂಡಿಸಿರುವ ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ವಿವಾದಗಳು, ಕೋಟ್ಯಂತರ ರೂಪಾಯಿ ಸಂಗ್ರಹವಾಗಿರುವ PM CARES ನಿಧಿಯ ಪಾರದರ್ಶಕತೆ ಕುರಿತ ಪ್ರಶ್ನೆಗಳು ಹಾಗೂ ದೇಶದಾದ್ಯಂತ ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ ಲಕ್ಷಾಂತರ ಯುವಕರ ಭವಿಷ್ಯ ಹಾದಿತಪ್ಪಿರುವುದಕ್ಕೆ ಬಿಜೆಪಿ ಉತ್ತರಿಸಬೇಕಿದೆ. ಇದರೊಂದಿಗೆ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಐತಿಹಾಸಿಕ ಏರಿಕೆ ಕಂಡಿದ್ದು, ದಿನಬಳಕೆಯ ಅಗತ್ಯ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಜೀವನ ದುಸ್ತರವಾಗಿದೆ. ಸಾರ್ವಜನಿಕ ಆಸ್ತಿಗಳನ್ನು ಕಾರ್ಪೊರೇಟ್‌ ಸಂಸ್ಥೆಗಳಿಗೆ ಖಾಸಗೀಕರಣ ಮಾಡುವ ನೀತಿಗಳು ಮತ್ತು ಅದಾನಿ ಪ್ರಕರಣ ಸೇರಿದಂತೆ ಸರ್ಕಾರ ಹಾಗೂ ದೊಡ್ಡ ಉದ್ದಿಮೆದಾರರ ನಡುವಿನ ಸಂಬಂಧಗಳ ಕುರಿತು ಎದ್ದಿರುವ ಗಂಭೀರ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸದೇ ಓಡಿಹೋಗುತ್ತಿದೆ ಎಂದು ಸುರಜ್ ಜಿ ನಾಯ್ಕ ಆಪಾದಿಸಿದ್ದಾರೆ.

ದೇಶವನ್ನು ಕಾಡುತ್ತಿರುವ ಬ್ಯಾಂಕ್ ವಂಚನೆಗಳು, ಆರ್ಥಿಕ ಹಗರಣಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನ ಕುರಿತ ವೈಫಲ್ಯಗಳನ್ನು ಮುಚ್ಚಿಡಲು ಕರ್ನಾಟಕದ ಬಗ್ಗೆ ಸುಳ್ಳು ಪ್ರಚಾರ ಮಾಡುವುದು ಬಿಜೆಪಿಯ ಹತಾಶ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಇನ್ನೊಂದೆಡೆ, ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಜನಪರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರು, ರೈತರು, ಕಾರ್ಮಿಕರು, ಯುವಕರು ಹಾಗೂ ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಜನರ ತೆರಿಗೆ ಹಣವನ್ನು ಅತ್ಯಂತ ಪಾರದರ್ಶಕವಾಗಿ ಮತ್ತೆ ಜನರಿಗೇ ತಲುಪಿಸುವ ಮೂಲಕ ಅಭಿವೃದ್ಧಿಯ ಹೊಸ ಮಾದರಿಯನ್ನು ಕಾಂಗ್ರೆಸ್ ಸೃಷ್ಟಿಸಿದೆ. ಆದ್ದರಿಂದ, ಎಚ್. ಎನ್. ಚಂದ್ರಶೇಖರ್ ಅವರು ರಾಜ್ಯದ ಬಗ್ಗೆ ಮಾತನಾಡುವ ಮುನ್ನ ತಮ್ಮದೇ ಸರ್ಕಾರದ ನಿರುದ್ಯೋಗ, ಬೆಲೆ ಏರಿಕೆ ಹಾಗೂ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ವಿವಾದಗಳ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಲಿ. ಸುಳ್ಳು ಆರೋಪಗಳಿಂದ ಜನರನ್ನು ದಾರಿ ತಪ್ಪಿಸುವ ಕಾಲ ಮುಗಿದಿದ್ದು, ಕರ್ನಾಟಕದ ಪ್ರಜ್ಞಾವಂತ ಜನತೆ ಬಿಜೆಪಿಯ ಸುಳ್ಳು ಪ್ರಚಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250