ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಸಾವಿನಲ್ಲೂ ಸಿಗದ ಗೌರವ: ನೀರಿನಲ್ಲಿ ಶವ ಹೊತ್ತು ಸಾಗಿದ ದೊಡ್ಡಹಿತ್ತಲ್ ಜನ!

Pakka News Web • 4 ಜುಲೈ 2026,

ಅಂತಿಮ ಯಾತ್ರೆಯೂ ಮಾನವೀಯತೆಯನ್ನು ಕೇಳಿಕೊಂಡ ಕ್ಷಣ ಅದು. ಕುಟುಂಬದವರು ಕಣ್ಣೀರು ಹಾಕುತ್ತಾ ಬೀಳ್ಕೊಡಬೇಕಿದ್ದ ಮೃತದೇಹವನ್ನು, ಗ್ರಾಮಸ್ಥರು ಕುತ್ತಿಗೆಯವರೆಗೆ ಹರಿಯುತ್ತಿದ್ದ ಹೊಳೆಯ ನೀರಿನಲ್ಲಿ ತಲೆಯ ಮೇಲೆ ಹೊತ್ತು ಸಾಗಬೇಕಾದ ಹೃದಯವಿದ್ರಾವಕ ಘಟನೆ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡಹಿತ್ತಲ್‌ನಲ್ಲಿ ನಡೆದಿದೆ. ಮಳೆ, ನೆರೆ, ದಾರಿ ಇಲ್ಲದ ಬದುಕು, ಈ ಮೂರು ಪದಗಳಲ್ಲೇ ಅಲ್ಲಿನ ಜನರ ದಶಕಗಳ ದುಸ್ಥಿತಿ ಅಡಗಿದೆ.

ವಿಶ್ವದ ನಾನಾ ಭಾಗಗಳಿಗೆ ಗುಣಮಟ್ಟದ ವೀಳ್ಯದೆಲೆ ರಫ್ತು ಮಾಡುವ ಹೆಗ್ಗಳಿಕೆ ದೊಡ್ಡಹಿತ್ತಲ್ ಪ್ರದೇಶಕ್ಕಿದೆ. ಆದರೆ ಅದೇ ಊರಿನ ಐವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಇಂದಿಗೂ ಸುರಕ್ಷಿತ ಸಾರ್ವಜನಿಕ ರಸ್ತೆ ಇಲ್ಲ, ಹೊಳೆಯನ್ನು ದಾಟಲು ಶಾಶ್ವತ ಸೇತುವೆಯೂ ಇಲ್ಲ. ತಮ್ಮದೇ ಮನೆ ತಲುಪಲು ಖಾಸಗಿ ಜಾಗಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇಂದಿಗೂ ಮುಂದುವರಿದಿದೆ. ಸಾಮಾನ್ಯ ದಿನಗಳಲ್ಲಿ ಬೇರೆಯವರ ತೋಟ-ಹಿತ್ತಲು ದಾಟಿ ಸಂಚರಿಸುವ ಗ್ರಾಮಸ್ಥರ ಬದುಕು, ಮಳೆಗಾಲ ಆರಂಭವಾಗುತ್ತಿದ್ದಂತೆ ಸಂಪೂರ್ಣ ಅಪಾಯದ ಅಂಚಿಗೆ ತಳ್ಳಲ್ಪಡುತ್ತದೆ.

ಸಿದ್ದಾಪುರ ಭಾಗದಲ್ಲಿ ಭಾರಿ ಮಳೆಯಾದಾಗ ದೊಡ್ಡಹಿತ್ತಲ್ ಮಧ್ಯೆ ಹರಿಯುವ ಭಾಸ್ಕೇರಿ ಹೊಳೆ ಉಕ್ಕಿ ಹರಿದು ಮನೆ-ತೋಟಗಳಿಗೆ ನುಗ್ಗುತ್ತದೆ. ಆಗ ಶಾಲಾ ಮಕ್ಕಳು, ಮಹಿಳೆಯರು, ಉದ್ಯೋಗಕ್ಕೆ ಹೋಗುವವರು ಸೊಂಟದವರೆಗೆ, ಕೆಲವೊಮ್ಮೆ ಕುತ್ತಿಗೆಯವರೆಗೂ ನೀರಿನಲ್ಲಿ ನಡೆದು ಸಂಚರಿಸಬೇಕಾಗುತ್ತದೆ. ಪ್ರತೀ ಮಳೆಗಾಲವೂ ದೋಣಿಯ ನಿರೀಕ್ಷೆಯಲ್ಲಿ ಕಾಳಜಿ ಕೇಂದ್ರ ಸೇರುವ ಬದುಕು ಇಲ್ಲಿನ ಜನರಿಗೆ ವಾರ್ಷಿಕ ದುಃಖಾಚರಣೆಯಂತಾಗಿದೆ.

 ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಾಗ, ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವ ದಾರಿಯೇ ನೀರಿನಲ್ಲಿ ಮುಳುಗಿತ್ತು. ಕೊನೆಗೆ ಗ್ರಾಮಸ್ಥರು ಪ್ರಾಣ ಕೈಯಲ್ಲಿ ಹಿಡಿದು, ಹೊಳೆಯ ಮಧ್ಯೆ ನಡೆದು ಶವವನ್ನು ಸಾಗಿಸಬೇಕಾಯಿತು. ಸಾವಿನಲ್ಲೂ ಗೌರವ ಕಾಪಾಡಿಕೊಳ್ಳಲಾಗದ ಈ ಸ್ಥಿತಿ ಕೇವಲ ಒಂದು ಗ್ರಾಮದ ನೋವಲ್ಲ, ಗ್ರಾಮೀಣ ಮೂಲಸೌಕರ್ಯದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.

ಗ್ರಾಮಸ್ಥರ ಅಳಲು ಹೊಸದೇನಲ್ಲ. ರಸ್ತೆ, ಕಾಲುದಾರಿ, ಕಿರುಸೇತುವೆ ನಿರ್ಮಿಸಿಕೊಡಬೇಕು ಎಂಬ ಬೇಡಿಕೆಯನ್ನು ಅವರು ವರ್ಷಗಳಿಂದ ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಜಾಗದ ತಕರಾರು ನಡೆಯುತ್ತಿದೆ ಎಂಬ ನೆಪಗಳು ಮಾತ್ರ ಬದಲಾಗುತ್ತಿವೆ; ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಮಳೆಗಾಲದಲ್ಲಿ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭರವಸೆ ನೀಡುತ್ತಾರೆ, ಆದರೆ ನೆರೆ ಇಳಿದ ಬಳಿಕ ಆ ಮಾತುಗಳೂ ನೀರಿನಂತೆ ಕರಗಿ ಹೋಗುತ್ತವೆ ಎಂಬುದು ಸ್ಥಳೀಯರ ಬೇಸರ. ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಸಾರ್ವಜನಿಕರು ಬಳಸುತ್ತಿರುವ ದಾರಿ ಖಾಸಗಿ ಜಾಗದಲ್ಲಿದ್ದರೂ ಅದು ಓಡಾಟದ ಹಕ್ಕಿನ ಪ್ರಶ್ನೆಯಾಗುತ್ತದೆ; ಕಾಲುದಾರಿ ಮೂಲಭೂತ ಹಕ್ಕಿನ ಭಾಗ ಎಂಬುದನ್ನು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವೂ ಸ್ಪಷ್ಟಪಡಿಸಿದೆ. ಆದರೆ ದೊಡ್ಡಹಿತ್ತಲ್ ನಿವಾಸಿಗಳ ಪಾಲಿಗೆ ಆ ಹಕ್ಕು ಇನ್ನೂ ಕಾಗದದಲ್ಲೇ ಉಳಿದಿದೆ.

ಪ್ರತಿ ವರ್ಷ ಮಳೆ ಹಾನಿ ಪರಿಹಾರಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಅದರಲ್ಲಿ ಅಲ್ಪ ಭಾಗವನ್ನಾದರೂ ಬಳಸಿ ಇಲ್ಲಿ ಕಿರುಸೇತುವೆ ಹಾಗೂ ಸಾರ್ವಜನಿಕ ಕಾಲುದಾರಿ ನಿರ್ಮಿಸಿದ್ದರೆ, ಜನರು ತಮ್ಮ ಜೀವವನ್ನು ಪಣಕ್ಕಿಟ್ಟು ಸಂಚರಿಸುವ ಪರಿಸ್ಥಿತಿ ಬರದೇ ಇರಬಹುದಿತ್ತು. ಈಗಾದರೂ ಆಡಳಿತ ಮತ್ತು ಜನಪ್ರತಿನಿಧಿಗಳು ಭರವಸೆಗಳ ರಾಜಕಾರಣವನ್ನು ಬದಿಗಿಟ್ಟು, ದೊಡ್ಡಹಿತ್ತಲ್ ಜನರ ಮೂಲಭೂತ ಹಕ್ಕಾದ ರಸ್ತೆ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250