ಕಾರವಾರ:ಎನ್ಪಿಸಿಐಎಲ್ ಕೈಗಾ ಸ್ಥಳವು “ಎನ್ಪಿಸಿಐಎಲ್”ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನೀತಿಯಡಿಯಲ್ಲಿ, ಕಳೆದ ಎರಡು ದಶಕಗಳಿಂದ ನೆರೆಹೊರೆಯ ಜನರ ಕಲ್ಯಾಣ ಮತ್ತು ಪ್ರಗತಿಗಾಗಿ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಎನ್ಪಿಸಿಐಎಲ್ ಕೈಗಾ ಸದಾ ಕಾಲ ನೆರೆಹೊರೆಯ ಜನರ ಕಲ್ಯಾಣಕ್ಕಾಗಿ ಬದ್ಧವಾಗಿದೆ ಎಂದು ಎನ್ಪಿಸಿಐಎಲ್ ಕೈಗಾ ಸ್ಥಳ ನಿರ್ದೇಶಕ ಸುಬ್ರಾತ್ ದಾಸ್ ತಿಳಿಸಿದ್ದಾರೆ.

ಸುಬ್ರಾತ್ ದಾಸ್
ಎನ್ಪಿಸಿಐಎಲ್ ಕೈಗಾ ತನ್ನ ಸಿಎಸ್ಆರ್ ಕಾರ್ಯಕ್ರಮದ ಅಡಿ ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲಾ ಕಟ್ಟಡಗಳು, ಬಹುಪಯೋಗಿ ಸಭಾಂಗಣಗಳು, ವಸತಿನಿಲಯದ (ಹಾಸ್ಟೆಲ್) ಕಟ್ಟಡಗಳು, ಮೇಲ್ಮಟ್ಟದ ನೀರಿನ ಟ್ಯಾಂಕ್ಗಳು, ತೆರೆದ ಬಾವಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಾಲು ಸೇತುವೆಗಳು, ಅಂಗನವಾಡಿ ಕಟ್ಟಡಗಳು, ಕಾಂಕ್ರೀಟ್ ರಸ್ತೆಗಳು, ಶೌಚಾಲಯ ಬ್ಲಾಕ್ ಇತ್ಯಾದಿಗಳ ನಿರ್ಮಾಣದಂತಹ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಅಲ್ಲದೆ ಆರೋಗ್ಯ ಇಲಾಖೆಗೆ ಅಂಬುಲೆನ್ಸ್ಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸಿದೆ.
ಸಾರ್ವಜನಿಕರು, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಸಲ್ಲಿಸಿದ ಇಂತಹ ನೈಜ ಬೇಡಿಕೆಗಳಿಗೆ ಸ್ಪಂದಿಸಿ, ಕಾರವಾರದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರವಾರದ ಶಾಸಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಲೋಕೋಪಯೋಗಿ ಇಲಾಖೆ ಮತ್ತು ಎನ್ಪಿಸಿಐಎಲ್ ಕೈಗಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ತೀರ್ಮಾನದಂತೆ, ಸುಮಾರು 11 ಕಿಲೋಮೀಟರ್ ಉದ್ದದ “ಕಾರವಾರ ಕೈಗಾ-ಇಳಕಲ್ ರಸ್ತೆಯ ಕೆರವಾಡಿ–ಮಲ್ಲಾಪುರ–ಕುರ್ನಿಪೇಟ್ (ಕೈಗಾಕ್ರಾಸ್)” ವರೆಗಿನ ರಸ್ತೆ ಸುಧಾರಣಾ ಕಾಮಗಾರಿಯನ್ನು ಎನ್ಪಿಸಿಐಎಲ್ ಕೈಗಾ ಕೈಗೆತ್ತಿಕೊಳ್ಳುತ್ತಿದೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ ಕಾರ್ಯಾದೇಶವನ್ನು ನೀಡಲಾಗಿದೆ. ಕಾರವಾರದ ಲೋಕೋಪಯೋಗಿ ಇಲಾಖೆಯಿಂದ ಅಗತ್ಯವಿರುವ ಅನುಮತಿಗಳನ್ನು ಪಡೆದು ಕಾಮಗಾರಿ ಪ್ರಾರಂಭವಾಗಲಿದೆ. ಸುತ್ತ್ತಮುತ್ತಲಿನ ಹಳ್ಳಿಗಳ ಜನರ ಸುಗಮ, ಸುರಕ್ಷಿತಪ್ರಯಾಣಕ್ಕಾಗಿ ನಿಗದಿತ ಸಮಯದೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಎನ್ಪಿಸಿಐಎಲ್ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
