ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಮೂಕ ಪ್ರಾಣಿಗೂ ಜೀವ ಇದೆ!

Pakka News Web • 7 ಜುಲೈ 2026,

ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು, ರಕ್ತದ ಮಡುವಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೂಕ ಶ್ವಾನವೊಂದನ್ನು ಸಕಾಲದಲ್ಲಿ ರಕ್ಷಿಸಿ, ಚಿಕಿತ್ಸೆ ಕೊಡಿಸುವ ಮೂಲಕ ಗೋಕರ್ಣದ ಪ್ರಾಣಿ ಪ್ರೇಮಿಗಳು ಅಪರೂಪದ ಮಾನವೀಯತೆ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಕ್ಕೀಡಾಗುವ ಪ್ರಾಣಿಗಳನ್ನು ಕಂಡು ಕಾಣದಂತೆ ಹೋಗುವ ಜನರ ನಡುವೆ, ಈ ಯುವಕರ ಸಮಯೋಚಿತ ನಡೆ ಇಡೀ ಸಮಾಜಕ್ಕೇ ಮಾದರಿಯಾಗಿದೆ.

ಗೋಕರ್ಣದ ಕೆನರಾ ಬ್ಯಾಂಕ್ ಸಮೀಪ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಶ್ವಾನದ ತಲೆಗೆ ತೀವ್ರವಾದ ಗಾಯಗಳಾಗಿದ್ದವು. ರಸ್ತೆಯ ಮಧ್ಯದಲ್ಲೇ ಬಿದ್ದು ತೀವ್ರ ನೋವಿನಿಂದ ಒದ್ದಾಡುತ್ತಿದ್ದ ಆ ಶ್ವಾನದ ಸ್ಥಿತಿಯನ್ನು ಕಂಡು ಕರಗಿದ ಸ್ಥಳೀಯ ಪ್ರಾಣಿ ರಕ್ಷಕ ರವಿ ಹೊಸಕಟ್ಟ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಗೋಕರ್ಣ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯರೂ ಹಾಗೂ ಸದಾ ಪ್ರಾಣಿ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರಾಣಿ ಪ್ರೇಮಿ ಸುಜಯ ಶೆಟ್ಟಿ ಅವರಿಗೆ ಮಾಹಿತಿ ಮುಟ್ಟಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸುಜಯ ಶೆಟ್ಟಿ ಅವರು ಜರುಗಿದ ಸ್ಥಳಕ್ಕೆ ಧಾವಿಸಿದರು. ಶ್ವಾನದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡು ತಕ್ಷಣವೇ ಪಶು ವೈದ್ಯರಾದ ಡಾ. ವಿ. ಎಂ. ನಾಯ್ಕ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು. ಸ್ಥಳದಲ್ಲೇ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ತಂಡ, ವೈದ್ಯರ ಮಾರ್ಗದರ್ಶನದಲ್ಲಿ ಗಾಯಗೊಂಡ ಶ್ವಾನಕ್ಕೆ ಪ್ರಥಮ ಚಿಕಿತ್ಸೆ ನೀಡಿ, ನೋವು ನಿವಾರಕ ಹಾಗೂ ಜೀವ ರಕ್ಷಕ ಔಷಧಗಳನ್ನು ಒದಗಿಸಿತು. ಸಕಾಲದಲ್ಲಿ ಸಿಕ್ಕ ಈ ವೈದ್ಯಕೀಯ ಚಿಕಿತ್ಸೆಯಿಂದಾಗಿ ಶ್ವಾನವು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದೆ.

ಅಪಘಾತ ಮಾಡಿ ಯಾರಿಗೂ ತಿಳಿಯದಂತೆ ಪರಾರಿಯಾಗುವ ಮನುಷ್ಯರ ನಡುವೆ, ರಸ್ತೆಯಲ್ಲಿ ಬಿದ್ದಿದ್ದ ಮೂಕ ಜೀವದ ನೋವಿಗೆ ಮಿಡಿದು ಅದಕ್ಕೆ ಪುನರ್ಜನ್ಮ ನೀಡಿದ ಪ್ರಾಣಿ ರಕ್ಷಕ ರವಿ ಹೊಸಕಟ್ಟ, ಸುಜಯ ಶೆಟ್ಟಿ ಹಾಗೂ ಧಾವಿಸಿ ಬಂದು ಚಿಕಿತ್ಸೆ ನೀಡಿದ ಪಶುವೈದ್ಯ ಡಾ. ವಿ. ಎಂ. ನಾಯ್ಕ ಅವರ ಈ ಶ್ಲಾಘನೀಯ ಕಾರ್ಯಕ್ಕೆ ಗೋಕರ್ಣದ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250