ಸಾವಿನ ಸಂಖ್ಯೆ 7ಕ್ಕೆ ಏರಿಕೆ
ಒಟ್ಟಿಗೆ ದುಡಿಯುತ್ತಿದ್ದರು, ಒಟ್ಟಿಗೆ ನಗುತ್ತಿದ್ದರು, ಬದುಕಿನ ಕಷ್ಟ-ಸುಖಗಳನ್ನು ಜೊತೆಯಾಗಿಯೇ ಹಂಚಿಕೊಳ್ಳುತ್ತಿದ್ದರು. ದಿನದ ದಣಿವು ಆರಿಸಿಕೊಳ್ಳಲು, ಮನಸ್ಸಿಗೆ ನೆಮ್ಮದಿ ತರಲು ಆ ಗೆಳೆಯರ ದಂಡು ಪವಿತ್ರ ಕ್ಷೇತ್ರ ಧರ್ಮಸ್ಥಳ ಹಾಗೂ ಕರಾವಳಿ ಪ್ರವಾಸಕ್ಕೆಂದು ಖುಷಿಯಿಂದಲೇ ಕಾರು ಹತ್ತಿತ್ತು. ಆದರೆ, ವಿಧಿ ಆ ಮುಗ್ಧ ಯುವಕರ ಪಾಲಿಗೆ ಇಷ್ಟೊಂದು ಕ್ರೂರಿಯಾಗುತ್ತಾನೆ ಎಂದು ಯಾರೂ ಯೋಚಿಸಿರಲಿಲ್ಲ.
ಅರಬೈಲ್ ಘಟ್ಟದ ತಿರುವಿನಲ್ಲಿ ಕಾಯುತ್ತಿದ್ದ ಯಮಸ್ವರೂಪಿ ಲಾರಿ, ಆ ಗೆಳೆಯರ ನಗುವನ್ನು ಸದಾಕಾಲಕ್ಕೆ ಮೌನವಾಗಿಸಿದೆ. ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರ ಯಲ್ಲಾಪುರ ತಾಲೂಕಿನ ಬಳಗಾರ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ ಇಡೀ ರಾಜ್ಯವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.

ಗುರುವಾರ ಬೆಳಗ್ಗೆ ಈ ಭೀಕರ ಅಪಘಾತ ಸಂಭವಿಸಿದಾಗ ಆರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ವಿಧಿಯಾಟ ಅಲ್ಲಿಗೆ ನಿಲ್ಲಲಿಲ್ಲ, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮತ್ತೊಬ್ಬ ಗೆಳೆಯ ಸಚಿನ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದರೊಂದಿಗೆ ಒಟ್ಟಿಗೆ ಪ್ರವಾಸ ಹೊರಟಿದ್ದ ಗೆಳೆಯರ ಗುಂಪಿನ ಒಟ್ಟು ಸಾವಿನ ಸಂಖ್ಯೆ ಇದೀಗ ಏಳಕ್ಕೆ ಏರಿಕೆಯಾಗಿದ್ದು, ಇಡೀ ಹೆದ್ದಾರಿಯುದ್ದಕ್ಕೂ ರಕ್ತದ ಮಡುವಿನಲ್ಲಿ ಗೆಳೆಯರ ಶವಗಳು ಬಿದ್ದಿದ್ದ ದೃಶ್ಯ ಕಲ್ಲುಮನಸ್ಸಿನವರೂ ಕಣ್ಣೀರು ಹಾಕುವಂತಿತ್ತು.

ಮೃತ ಯುವಕರೆಲ್ಲರೂ ಧಾರವಾಡದ ಮೂಲದವರಾಗಿದ್ದು, ಹೊಟ್ಟೆಪಾಡಿಗಾಗಿ ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್‌ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಷ್ಟದ ನಡುವೆಯೂ ಬದುಕಿನ ಸಣ್ಣ ಸಣ್ಣ ಖುಷಿಗಳನ್ನು ಹಂಚಿಕೊಳ್ಳುತ್ತಿದ್ದ ಈ ಯುವಕರನ್ನು ಹೊತ್ತೊಯ್ಯುತ್ತಿದ್ದ ತೂಫಾನ್ ಕ್ರೂಸರ್ ವಾಹನಕ್ಕೆ ಅರಬೈಲ್ ಘಟ್ಟದ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ ಜೋರಾಗಿ ಡಿಕ್ಕಿ ಹೊಡೆದಿದೆ. ಕ್ರೂಸರ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿತ್ತು.
ಒಳಗೆ ಸಿಲುಕಿದ್ದ ಧಾರವಾಡದ ಕುರುಬಗಟ್ಟಿಯ ಚಾಲಕ ಸಂಜೀವ ಮೈಲಾರ ಅಂಗಡಿ, ಸಾಧನಕೇರಿಯ ಅಕ್ಷಯ ತೇಜಪ್ಪ ಮುರಳವರ, ಜಯನಗರದ ಅಭೀಷೇಕ ಈಶ್ವರ, ಸಪ್ತಾಪುರದ ಅಭಿಷೇಕ ಮಲ್ಲೇಶ ಮಡಬಾವಿ, ಜೆಎಸ್‌ಎಸ್ ಕ್ಯಾಂಪ್ ಬಳಿಯ ಬಸಪ್ಪ ದೇವಪ್ಪ ಕನಕನವರ ಹಾಗೂ ಮುರುಘಾಮಠದ ಬಳಿಯ ಮಂಜುನಾಥ ಅಶೋಕ ಚುಳಕಿ ಅವರ ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ತೀವ್ರವಾಗಿ ಗಾಯಗೊಂಡಿರುವ ಶಿವರಾಜಗುರಪ್ಪ ಮಡಿವಾಳ ಹಾಗೂ ಚನ್ನಬಸು ಸಂಪಗಾಂವಿಮಠ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಭೀಕರ ದುರಂತಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಮ್ಮ ‘X’ ಖಾತೆಯ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಾವನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ. ಇತ್ತ ಘಟನೆ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನುಜ್ಜುಗುಜ್ಜಾಗಿದ್ದ ವಾಹನದಿಂದ ಹೊರತೆಗೆಯಲಾದ ಯುವಕರ ಪಾರ್ಥಿವ ಶರೀರಕ್ಕೆ ಶಾಸಕರು ಅಂತಿಮ ನಮನ ಸಲ್ಲಿಸಿ, ಹೆತ್ತವರ ಆಸರೆಯಾಗಬೇಕಿದ್ದ ಯುವಕರನ್ನು ಕಳೆದುಕೊಂಡು ಆಕ್ರಂದನ ಮುಗಿಲುಮುಟ್ಟಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಯಲ್ಲಾಪುರ ಠಾಣೆ ಪೊಲೀಸರು ಹಾಗೂ ಹೆದ್ದಾರಿ ಗಸ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸದ್ಯ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿಗೆ ದುಡಿದು, ಒಟ್ಟಿಗೆ ತಿರುಗಿ ಬರಲು ಹೋಗಿದ್ದ ಕರುಳಿನ ಕುಡಿಗಳು ಒಟ್ಟಿಗೇ ಶವವಾಗಿ ಮರಳಿರುವುದನ್ನು ಕಂಡು ಧಾರವಾಡದ ಆಯಾ ಬಡಾವಣೆಗಳಲ್ಲಿ ಕಣ್ಣೀರಿನ ಸಾಗರವೇ ಹರಿದಿದೆ.
