ನಗರದ ಹೃದಯಭಾಗವಾದ ಸೋಮಾನಿ ವೃತ್ತದಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಪೊಲೀಸರ ಎದುರೇ ಹೈಡ್ರಾಮಾ ನಡೆಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸೈಲೆನ್ಸರ್ ಇಲ್ಲದ ಬೈಕ್‌ನಲ್ಲಿ ಅತೀವ ಶಬ್ದ ಮಾಡುತ್ತಾ ಸಂಚರಿಸುತ್ತಿದ್ದ ಯುವಕನನ್ನು ಪೊಲೀಸರು ತಡೆದಾಗ, ಪೊಲೀಸರಿಗೇ ಅವಾಚ್ಯವಾಗಿ ಮಾತನಾಡಿ, ಬೆದರಿಕೆ ಹಾಕುತ್ತಾ ರಂಪಾಟ ನಡೆಸಿದ್ದಾನೆ. ಕೊನೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ದಾಂಡೇಲಿ ನಗರದ ದಿನೇಶ್ ಎಂಬಾತ ಮದ್ಯದ ಅಮಲಿನಲ್ಲಿ ಬೈಕ್ ಚಲಾಯಿಸುತ್ತಿದ್ದಾನೆ ಎಂದು ಗಮನಿಸಿದ ದಾಂಡೇಲಿ ನಗರ ಠಾಣೆ ಪೊಲೀಸರು ವಾಹನವನ್ನು ತಡೆದರು. ಆದರೆ ತಪ್ಪು ಒಪ್ಪಿಕೊಳ್ಳುವ ಬದಲು, “ನನ್ನ ವಾಹನವನ್ನು ಹೇಗೆ ತಡೆದಿರಿ?”, “ಏನು ಮಾಡುತ್ತೀರೋ ಮಾಡಿಕೊಳ್ಳಿ”, “ನಾನು ಜೈಲಿಗೆ ಹೋಗಿ ಬಂದವನು, ನಿಮ್ಮನ್ನು ನೋಡಿಕೊಳ್ಳುತ್ತೇನೆ” ಎಂದು ಪೊಲೀಸರನ್ನೇ ಸವಾಲು ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಕುಡಿದು ವಾಹನ ಚಲಾಯಿಸುವುದು ಅಪಾಯಕಾರಿ ಎಂದು ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಆತ ಯಾವುದೇ ಮಾತು ಕೇಳದೆ ಮತ್ತಷ್ಟು ಆಕ್ರಮಣಕಾರಿ ವರ್ತನೆ ತೋರಿದ್ದಾನೆ. ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಅವರೊಂದಿಗೇ ವಾಗ್ವಾದ ನಡೆಸಿ, ಹಲ್ಲೆಗೆ ಮುಂದಾಗುವ ಯತ್ನ ಮಾಡಿದ್ದಾನೆ. ಸಾರ್ವಜನಿಕರು ಕೂಡ ಸಮಾಧಾನಪಡಿಸಲು ಪ್ರಯತ್ನಿಸಿದರೂ ಆತ ಕೇಳದೆ ನಿರಂತರ ಗಲಾಟೆ ಮುಂದುವರಿಸಿದ್ದಾನೆ.
ಈ ವೇಳೆ ತನ್ನೊಂದಿಗೆ ಇದ್ದ ಮತ್ತೊಬ್ಬ ಯುವಕನಿಗೆ ಘಟನೆಯ ವಿಡಿಯೊ ಚಿತ್ರೀಕರಿಸುವಂತೆ ಹೇಳಿದ್ದಾನೆ. ಪೊಲೀಸರು ತಡೆಯಲು ಮುಂದಾದ ಬಳಿಕ ತಾನೇ ಮೊಬೈಲ್ ಹಿಡಿದು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಾ ವಿಡಿಯೊ ಚಿತ್ರೀಕರಿಸುತ್ತಿದ್ದನು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಹೈಡ್ರಾಮಾದಿಂದ ಸೋಮಾನಿ ವೃತ್ತದಲ್ಲಿ ಜನಸಂದಣಿ ಉಂಟಾಗಿ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್‌ಐ ಅಮೀನ್ ಅತ್ತಾರ್ ಪರಿಸ್ಥಿತಿಯನ್ನು ನಿಯಂತ್ರಿಸಿ, ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಚದುರಿಸಿ ಸಂಚಾರವನ್ನು ಸುಗಮಗೊಳಿಸಿದರು.
ಪೊಲೀಸ್ ಠಾಣೆಯಲ್ಲಿಯೂ ದಿನೇಶ್ ಮದ್ಯದ ಅಮಲಿನಿಂದ ಸಹಕರಿಸದೆ ವರ್ತಿಸಿದ್ದಾನೆ. ಬ್ರೆತ್ ಅನಾಲೈಸರ್ ಪರೀಕ್ಷೆಗೆ ಮುಂದಾದಾಗಲೂ ಪರೀಕ್ಷೆಗೆ ನಿರಾಕರಿಸಿ ಗಲಾಟೆ ಮುಂದುವರಿಸಿದ್ದಾನೆ. ಇದರಿಂದ ಪೊಲೀಸರು ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
