ಕಾನೂನಿನ ಕೈಗಳು ತುಂಬಾ ಉದ್ದ ಇರುತ್ತವೆ ಮತ್ತು ತಪ್ಪಿಸಿಕೊಂಡು ಓಡುವ ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬೀಳುವುದು ಖಚಿತ ಎಂಬುದಕ್ಕೆ ಈ ಕಾರ್ಯಾಚರಣೆಯೇ ಸಾಕ್ಷಿ. ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರ ಕಣ್ಣಿಗೆ ಮಣ್ಣು ಎರೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯಾದ ಬೆಳಗಾವಿ ಬೈಲಹೊಂಗಲದ ತೋಟದಗಲ್ಲಿ ನಿವಾಸಿ ರಫಿಕ್ ಅಹ್ಮದ್ (ತಂದೆ ಮೆಹಬೂಬ ಸುಬಾನಿ ಕಮಟಗಿ) ಕೊನೆಗೂ ಅಂಕೋಲಾ ಪೊಲೀಸರ ಅತಿಥಿಯಾಗಿದ್ದಾನೆ. 2013 ರಿಂದಲೇ ಕಾನೂನಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತನನ್ನು ಪತ್ತೆ ಹಚ್ಚಲೆಂದೇ ವಿಶೇಷ ತಂಡವೊಂದು ಸದ್ದಿಲ್ಲದೆ ಕಾರ್ಯಾಚರಣೆಗೆ ಇಳಿದಿತ್ತು.
ಖಚಿತವಾದ ತಾಂತ್ರಿಕ ಮಾಹಿತಿ ಮತ್ತು ನೆಟ್ವರ್ಕ್ ಆಧಾರದ ಮೇಲೆ ಆರೋಪಿಯ ಚಲನವಲನದ ಮೇಲೆ ನಿರಂತರ ನಿಗಾ ಇಟ್ಟಿದ್ದ ಪೊಲೀಸರಿಗೆ, ಆತ ಸದ್ಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಸುಳಿವು ಸಿಕ್ಕಿತ್ತು. ದಿನಾಂಕ 10-07-2026 ರಂದು ಆರೋಪಿಯು ಹುಬ್ಬಳ್ಳಿಯಿಂದ ಕೇರಳದ ಕಡೆಗೆ ಲಾರಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಅಂಕೋಲಾದ ಬಾಳೆಗುಳಿ ಎಂಬಲ್ಲಿ ಹೊಂಚು ಹಾಕಿ ಕುಳಿತಿದ್ದ ಜಾಣ ಪೊಲೀಸರ ತಂಡ ಆತನನ್ನು ನಾಟಕೀಯವಾಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ತಲೆಮರೆಸಿಕೊಂಡಿದ್ದ ದಿನದಿಂದ ಇಂದಿನವರೆಗೆ ತಾನು ಸಿಕ್ಕಿಬೀಳುವುದಿಲ್ಲ ಎಂದೇ ಭಾವಿಸಿದ್ದ ಆರೋಪಿಗೆ ಪೊಲೀಸರ ಈ ಆಕಸ್ಮಿಕ ದಾಳಿ ಶಾಕ್ ನೀಡಿದೆ. ಸದ್ಯ ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ದೀರ್ಘಕಾಲದ ಈ ವಾರೆಂಟ್ ಆರೋಪಿಯನ್ನು ಪತ್ತೆ ಹಚ್ಚುವ ಸವಾಲಿನ ಕಾರ್ಯಾಚರಣೆಯು ಮೇಲಾಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಶೇಕರ ಮಠಪತಿ ರವರ ಸಮರ್ಥ ನೇತೃತ್ವದಲ್ಲಿ ನಡೆದ ಈ ಭೇಟೆಯಲ್ಲಿ ಪಿ.ಎಸ್.ಐ ಸುನೀಲ ಹುಲ್ಲೋಳ್ಳಿ, ಎ.ಎಸ್.ಐ ದೇವಿದಾಸ ಚಾಪೋಲೇಕರ, ಸಿಬ್ಬಂದಿಗಳಾದ ಮೋಹನ ಗೌಡ, ಮಹಾದೇವ ಸಿದ್ದಿ, ರಮೇಶ ತುಂಗಳ, ರಯೀಸ ಬಾಗವಾನ ಹಾಗೂ ಎಚ್.ಆರ್.ಪಿ ವಾಹನ ಚಾಲಕರಾದ ಉಮೇಶ ಗಾಳಿ ಅವರು ಅತ್ಯಂತ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ ಇಡೀ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡದ ಕಾರ್ಯ ವೈಖರಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
