ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಅಪರೂಪದ ದೈತ್ಯ ಏಡಿ ಪತ್ತೆ!

Pakka News Web • 14 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಾದನಗೇರಿಯಲ್ಲಿ ಮೀನುಗಾರರು ಹಾಗೂ ಏಡಿ ಸಾಕಾಣಿಕೆದಾರರನ್ನು ಆಶ್ಚರ್ಯಚಕಿತಗೊಳಿಸುವ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿನ ಖ್ಯಾತ ಏಡಿ ಸಾಕಾಣಿಕೆದಾರ ಭೈರವ ನಾಗಪ್ಪ ಹರಿಕಂತ್ರ ಅವರ ಫಾರ್ಮ್‌ನಲ್ಲಿ ಬರೋಬ್ಬರಿ 3.2 ಕೆಜಿ ತೂಕದ ದೈತ್ಯ ‘ಕಲ್ಲು ಜೆಂಜಿ’ (ಮಡ್ ಕ್ರ್ಯಾಬ್) ಏಡಿಯೊಂದು ಪತ್ತೆಯಾಗಿದೆ. ಸಾಮಾನ್ಯವಾಗಿ ಇಷ್ಟು ದೊಡ್ಡ ಗಾತ್ರದ ಏಡಿಗಳು ಸಿಗುವುದು ಅತ್ಯಂತ ವಿರಳವಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕೆ ವೇಳೆ ಬಲೆಗೆ ಬಿದ್ದಿರುವ ಈ ವಿಶಿಷ್ಟ ಏಡಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅತ್ಯಂತ ಆರೋಗ್ಯ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರುವ ಈ ಏಡಿಯ ಲಭ್ಯತೆ ಸ್ಥಳೀಯ ಮೀನುಗಾರರಲ್ಲಿ ಹೊಸ ಸಂಭ್ರಮವನ್ನು ತಂದಿದೆ.

ಅರಬ್ಬಿ ಸಮುದ್ರದ ನದಿ ಮತ್ತು ಸಮುದ್ರ ಸಂಗಮದ ಮ್ಯಾಂಗ್ರೋವ್ (ಕಂಡ್ಲಾ) ಪ್ರದೇಶಗಳಲ್ಲಿ ಬೆಳೆಯುವ ಇಂತಹ ಕಲ್ಲು ಜೆಂಜಿ ಏಡಿಗಳಿಗೆ ದೇಶ-ವಿದೇಶಗಳಲ್ಲಿ ಅಸಾಧಾರಣ ಬೇಡಿಕೆಯಿದೆ. ಜಿಲ್ಲೆಯ ಮಾದನಗೇರಿ, ಬೇಲೆಕೇರಿ, ತದಡಿ, ಅಘನಾಶಿನಿ, ಹೊಸ್ಕಟ್ಟಾ, ಬಾಡಾ, ಕಾಗಾಲ, ಕುಮಟಾ ಹಾಗೂ ಹೊನ್ನಾವರ ಭಾಗಗಳಲ್ಲಿ ಉಪ್ಪುನೀರು ಮತ್ತು ಸಿಹಿನೀರು ಸೇರುವ ಪರಿಸರದಲ್ಲಿ ಈ ಏಡಿಗಳ ಸಾಕಾಣಿಕೆ ಮತ್ತು ಸಂಗ್ರಹಣೆ ವ್ಯಾಪಕವಾಗಿ ನಡೆಯುತ್ತದೆ. ಇಲ್ಲಿಂದ ಸಂಗ್ರಹವಾಗುವ ಜೀವಂತ ಏಡಿಗಳನ್ನು ಮಂಗಳೂರು ಹಾಗೂ ಚೆನ್ನೈ ಮೂಲಕ ವಿಮಾನ ಮಾರ್ಗದಲ್ಲಿ ಸಿಂಗಾಪುರ್, ಮಲೇಶಿಯಾ, ಥೈಲ್ಯಾಂಡ್, ಹಾಂಗ್ ಕಾಂಗ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ವಿಶೇಷವಾಗಿ ಹೆಣ್ಣು ಮೊಟ್ಟೆ ಏಡಿ ಹಾಗೂ ಗಟ್ಟಿಯಾದ ಗಂಡು ಏಡಿಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬಂಗಾರದಂತಹ ಬೆಲೆ ಸಿಗುತ್ತದೆ.

ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಕಳೆದ ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯ ಮೀನುಗಾರರಿಂದ ಏಡಿಗಳನ್ನು ಖರೀದಿಸಿ ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಿ ರಫ್ತು ಮಾಡುವ ಮೂಲಕ ಅಂಕೋಲಾದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಂಡು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ಈ ಉದ್ಯಮಕ್ಕೆ, ಈಗ ವಿಮಾನ ಸೇವೆಗಳು ಸಹಜ ಸ್ಥಿತಿಗೆ ಮರಳಿರುವುದರಿಂದ ಹೊಸ ಆಶಾಕಿರಣ ಮೂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ದೊರೆಯುತ್ತಿದ್ದು, ರಫ್ತು ವ್ಯಾಪಾರ ಮತ್ತೆ ಚುರುಕುಗೊಂಡಿದೆ.

ಆದರೆ, ಈ ಯಶಸ್ಸಿನ ನಡುವೆಯೂ ಪರಿಸರ ಬದಲಾವಣೆಯ ಕಹಿ ಸತ್ಯ ಸಾಕಾಣಿಕೆದಾರರನ್ನು ಆತಂಕಕ್ಕೆ ತಳ್ಳಿದೆ. ಮ್ಯಾಂಗ್ರೋವ್ ಅರಣ್ಯಗಳ ನಾಶ, ಹವಾಮಾನ ವೈಪರೀತ್ಯ, ನೀರಿನ ಮಾಲಿನ್ಯ ಹಾಗೂ ಅತಿಯಾದ ಮೀನುಗಾರಿಕೆಯಿಂದಾಗಿ ಕಲ್ಲು ಜೆಂಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭೈರವ ನಾಗಪ್ಪ ಹರಿಕಂತ್ರ ಅವರು, ಹಲವು ವರ್ಷಗಳಿಂದ ಏಜೆಂಟರ ಮೂಲಕ ವಿದೇಶಗಳಿಗೆ ಏಡಿ ರಫ್ತು ಮಾಡುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಲಭ್ಯತೆ ಕಡಿಮೆಯಾಗುತ್ತಿರುವುದು ಭವಿಷ್ಯದ ಉದ್ಯಮಕ್ಕೆ ದೊಡ್ಡ ಸವಾಲಾಗಿದೆ. ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದರೆ ಮಾತ್ರ ಈ ಸಾಂಪ್ರದಾಯಿಕ ಉದ್ಯಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೀನುಗಾರಿಕಾ ಕ್ಷೇತ್ರದ ತಜ್ಞರ ಪ್ರಕಾರ, ಮ್ಯಾಂಗ್ರೋವ್ ಪರಿಸರವನ್ನು ಕಟ್ಟುನಿಟ್ಟಾಗಿ ಸಂರಕ್ಷಿಸುವುದು, ತೀರಾ ಚಿಕ್ಕ ಗಾತ್ರದ ಏಡಿಗಳನ್ನು ಹಿಡಿಯುವುದಕ್ಕೆ ನಿಯಂತ್ರಣ ಹೇರುವುದು, ವೈಜ್ಞಾನಿಕ ಸಾಕಾಣಿಕೆಗೆ ಸರ್ಕಾರದಿಂದ ಉತ್ತೇಜನ ನೀಡುವುದು ಹಾಗೂ ನೇರ ರಫ್ತು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೆ ಉತ್ತರ ಕನ್ನಡದ ಈ ವಿಶಿಷ್ಟ ಏಡಿ ಉದ್ಯಮವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಕಾರವಾಗಲಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250