ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಖೋಟಾನೋಟು ದಂಧೆಯ ಜಾಲ: ಹಳಿಯಾಳದ ವ್ಯಕ್ತಿ ಬಂಧನ!

Pakka News Web • 17 ಜುಲೈ 2026,

ಹಣವನ್ನು ರಾತ್ರೋರಾತ್ರಿ ದ್ವಿಗುಣಗೊಳಿಸುವ, ಸುಲಭವಾಗಿ ಶ್ರೀಮಂತರಾಗುವ ದುರಾಸೆಗೆ ಬಿದ್ದು ಸಮಾಜದ ಶಾಂತಿ ಕದಡುವ ಜಾಲವೊಂದು ಕರಾವಳಿ ಭಾಗದಲ್ಲಿ ಸಕ್ರಿಯವಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಐದುನೂರು ರೂಪಾಯಿ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸುತ್ತಿದ್ದ ದಂಧೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಭೇದಿಸಿದ್ದು, ಇಡೀ ಜಾಲವನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಅಂತರಜಿಲ್ಲಾ ಖೋಟಾನೋಟು ದಂಧೆಯ ಜಾಲದಲ್ಲಿ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ವ್ಯಕ್ತಿಯೊಬ್ಬನೂ ಭಾಗಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಜನ ಜಾಗೃತರಾಗಿರಬೇಕಾದ ಅವಶ್ಯಕತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಡಿಗೆ ಮನೆಯೊಂದರ ಮೇಲೆ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಹಳಿಯಾಳ ತಾಲೂಕಿನ ನಿವಾಸಿ ಸಂದೀಪ್ ಪುಂಡಲೀಕ ಶೋಲಂಬಿ (30) ಎಂಬಾತನೂ ಸೇರಿದ್ದಾನೆ. ಕಾಸರಗೋಡು, ಪುತ್ತೂರು, ಬೆಳ್ತಂಗಡಿ ಮೂಲದ ಕಿಲಾಡಿಗಳೊಂದಿಗೆ ಕೈಜೋಡಿಸಿ ಈತ ಖೋಟಾನೋಟು ಮುದ್ರಣದ ಕಪ್ಪು ಜಾಲದಲ್ಲಿ ಸಕ್ರಿಯನಾಗಿದ್ದ ಎನ್ನುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯ ಜನರೇ, ನಿಮ್ಮ ಜೇಬಿಗೆ ಬೀಳದಿರಲಿ ಕನ್ನ!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಗಳು ಸುಮಾರು ಒಂದು ತಿಂಗಳಿನಿಂದ ಬಾಡಿಗೆ ಮನೆಯಲ್ಲೇ ಕಂಪ್ಯೂಟರ್, ಫೋಟೋಕಾಪಿಯರ್, ಸೀಲುಗಳು ಮತ್ತು ಸೆಕ್ಯುರಿಟಿ ಥ್ರೆಡ್ ಬಳಸಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಸದ್ಯಕ್ಕೆ ಈ ನೋಟುಗಳು ಮಾರುಕಟ್ಟೆಗೆ ಚಲಾವಣೆಗೆ ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರಾದರೂ, ಇಂತಹ ಜಾಲಗಳು ನಮ್ಮ ಜಿಲ್ಲೆಯಲ್ಲೂ ಕಾರ್ಯನಿರ್ವಹಿಸುತ್ತಿರಬಹುದು ಎಂಬ ಸಂಶಯವನ್ನು ತಳ್ಳಿಹಾಕುವಂತಿಲ್ಲ.

ವ್ಯಾಪಾರಸ್ಥರು, ಬ್ಯಾಂಕ್ ಗ್ರಾಹಕರು ಮತ್ತು ಸಾರ್ವಜನಿಕರು 500 ರೂ. ಮುಖಬೆಲೆಯ ನೋಟುಗಳನ್ನು ಪಡೆಯುವಾಗ ಅತ್ಯಂತ ಜಾಗರೂಕರಾಗಿರಬೇಕು. ಅಸಲಿ ನೋಟಿನ ಸೆಕ್ಯುರಿಟಿ ಫೀಚರ್ಸ್‌ಗಳನ್ನು ಸರಿಯಾಗಿ ಗಮನಿಸದಿದ್ದರೆ ಸಾರ್ವಜನಿಕರು ವಂಚನೆಗೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ. ಅಪರಿಚಿತ ವ್ಯಕ್ತಿಗಳು ವ್ಯವಹಾರ ನಡೆಸುವಾಗ ಅನುಮಾನಾಸ್ಪದವಾಗಿ ವರ್ತಿಸಿದರೆ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕಾದ ಅನಿವಾರ್ಯತೆ ಎದುರಾಗಿದೆ.

ಬಂಧಿತ ಆರೋಪಿಗಳಲ್ಲಿ ಹಳಿಯಾಳದ ಸಂದೀಪ್ ಕೂಡ ಸೇರಿರುವುದರಿಂದ, ಈ ಖೋಟಾನೋಟು ದಂಧೆಯ ಬೇರುಗಳು ಉತ್ತರ ಕನ್ನಡ ಜಿಲ್ಲೆಯಲ್ಲೂ ಹರಡಿವೆಯೇ ಎಂಬ ಬಲವಾದ ಶಂಕೆ ಮೂಡಿದೆ. ಈ ಕಪ್ಪು ದಂಧೆಯ ಜಾಲ ಕೇವಲ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಿದೆಯೇ ಅಥವಾ ಹಳಿಯಾಳ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲೂ ಇವರ ಏಜೆಂಟರುಗಳು ಸಕ್ರಿಯರಾಗಿದ್ದಾರೆಯೇ? ಮುದ್ರಣವಾದ ನೋಟುಗಳನ್ನು ಚಲಾವಣೆ ಮಾಡಲು ಉತ್ತರ ಕನ್ನಡ ಜಿಲ್ಲೆಯನ್ನು ಇವರು ಗುರಿಯಾಗಿಸಿಕೊಂಡಿದ್ದರೇ? ಎನ್ನುವ ಆಯಾಮಗಳಲ್ಲಿ ತನಿಖೆಯಾಗಬೇಕಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಬಂಧಿತ ಆರೋಪಿ ಸಂದೀಪ್‌ನ ಹಿನ್ನೆಲೆ, ಆತನ ಸ್ಥಳೀಯ ಸಂಪರ್ಕಗಳು ಮತ್ತು ಜಿಲ್ಲೆಯಲ್ಲಿ ಆತ ಯಾರ ಜೊತೆ ಒಡನಾಟ ಹೊಂದಿದ್ದ ಎನ್ನುವುದರ ಕುರಿತು ಸಮಗ್ರ ಹಾಗೂ ಆಳವಾದ ತನಿಖೆ ನಡೆಸಬೇಕು. ಜಿಲ್ಲೆಯ ಗಡಿಭಾಗಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲೆಯ ನಾಗರಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250