ಅಂಕೋಲಾದ ಬೆಳಂಬಾರ ಕಡಲ ತೀರದ ಬಂಡೆಯೊಂದರ ಮೇಲೆ ಸುಮಾರು 8 ಅಡಿ ಉದ್ದದ ದೈತ್ಯ ಡಾಲ್ಫಿನ್ ಕಳೆಬರ ಪತ್ತೆಯಾಗಿದ್ದು, ಕರಾವಳಿ ಜನರಲ್ಲಿ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದೆ. ಸಮುದ್ರ ತೀರದಲ್ಲಿ ಓಡಾಡುತ್ತಿದ್ದ ಮೀನುಗಾರರು ಈ ಭೀಕರ ದೃಶ್ಯವನ್ನು ಕಂಡು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸಾಗರ ಜೀವಿ ವಿಭಾಗದ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ದೇಹ ಸಂಪೂರ್ಣ ಕೊಳೆತು ಹೋಗಿರುವುದರಿಂದ ಡಾಲ್ಫಿನ್ ಮೃತಪಟ್ಟು ಹಲವು ದಿನಗಳೇ ಕಳೆದಿರಬಹುದು ಎಂದು ಅಂದಾಜಿಸಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಅಪರೂಪದ ‘ಓಶಿಯನ್ ಹಂಪ್‌ಬ್ಯಾಕ್’ ಜಾತಿಗೆ ಸೇರಿದ ಡಾಲ್ಫಿನ್ ಎನ್ನಲಾಗಿದ್ದು, ಇದರ ನಿಖರ ಪ್ರಭೇದದ ತನಿಖೆ ನಡೆಯುತ್ತಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಸಮುದ್ರದ ರಕ್ಕಸ ಅಲೆಗಳ ಅಬ್ಬರಕ್ಕೆ ಸಿಲುಕಿ ಈ ಡಾಲ್ಫಿನ್ ಮೃತಪಟ್ಟಿರಬಹುದು ಅಥವಾ ತೀವ್ರ ಅನಾರೋಗ್ಯದಿಂದ ಸತ್ತು ತೇಲಿ ಬಂದು ಇಲ್ಲಿನ ಬಂಡೆಗಳ ನಡುವೆ ಸಿಲುಕಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಡಾಲ್ಫಿನ್‌ಗಳ ಸಾವು, ಸಮುದ್ರದ ಆರೋಗ್ಯ ಹದಗೆಡುತ್ತಿರುವ ಮುನ್ಸೂಚನೆಯೇ ಎಂಬ ಆತಂಕವೂ ಎದುರಾಗಿದೆ.
ಸದ್ಯ ಸಾವಿನ ರಹಸ್ಯ ಭೇದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕಳೆಬರದ ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ಅವರ ಅಂತಿಮ ತನಿಖಾ ವರದಿಯ ಬಳಿಕವಷ್ಟೇ ಈ ಕಡಲ ಜೀವಿಯ ನಿಗೂಢ ಸಾವಿಗೆ ನಿಖರ ಕಾರಣ ಏನೆಂಬುದು ಅಧಿಕೃತವಾಗಿ ಹೊರಬರಬೇಕಿದೆ.
