ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ದಾಂಡೇಲಿಯಲ್ಲಿ ಏನಿದು ಮೇವಾ ಮೋದಕ್?

Pakka News Web • 18 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಂದ ತಕ್ಷಣ ಕಣ್ಣಮುಂದೆ ಬರೋದು ಪ್ರಕೃತಿಯ ಸೊಬಗು, ಪ್ರವಾಸಿಗರ ನೆಚ್ಚಿನ ತಾಣ. ಆದರೆ, ಇದೇ ಶಾಂತಿಯುತ ನಗರದ ಹೃದಯಭಾಗದಲ್ಲಿ, ಯಾರಿಗೂ ಸಂಶಯ ಬಾರದಂತೆ ಹೆಸರಲ್ಲಿ ಮಾದಕ ಲೋಕದ ಜಾಲವೊಂದು ಸದ್ದಿಲ್ಲದೆ ಹೆಣೆದುಕೊಂಡಿತ್ತು! ಪವಿತ್ರವಾದ ‘ಮೋದಕ’ ಎಂಬ ಹೆಸರಿನ ಮರೆಯಲ್ಲಿ ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆಘಾತಕಾರಿ ಘಟನೆಯೊಂದು ಈಗ ಬೆಳಕಿಗೆ ಬಂದಿದ್ದು, ಇಡೀ ನಗರವೇ ಬೆಚ್ಚಿಬೀಳುವಂತೆ ಮಾಡಿದೆ.

ದಾಂಡೇಲಿ ನಗರದ ಪಟೇಲ್ ಸರ್ಕಲ್ ಬಳಿಯ ಜಿ.ಎನ್. ರಸ್ತೆಯಲ್ಲಿರುವ ‘ಎಸ್.ಕೆ. ಏಜೆನ್ಸಿ’ ಎಂಬ ಅಂಗಡಿಯೇ ಈ ಕರಾಳ ದಂಧೆಯ ಕೇಂದ್ರವಾಗಿತ್ತು. ಮೇಲ್ನೋಟಕ್ಕೆ ಸಾಮಾನ್ಯ ವ್ಯಾಪಾರದಂತೆ ಕಂಡರೂ, ಇದರ ಒಳಗಡೆ ನಡೆಯುತ್ತಿದ್ದುದು ಮಾತ್ರ ಯುವ ಸಮೂಹವನ್ನು ಬಲಿಪಡೆಯುವ ವ್ಯವಸ್ಥಿತ ಸಂಚು. ಅಂಗಡಿಯೊಳಗೆ ‘SANAN MEWA MODAK (SPECIAL)’ ಎಂಬ ಆಕರ್ಷಕ ಪ್ಯಾಕೆಟ್‌ಗಳಲ್ಲಿ ಸಿಹಿ ತಿನಿಸಿನಂತೆ ಈ ಮಾದಕ ವಸ್ತುವನ್ನು ಅಡಗಿಸಿಡಲಾಗಿತ್ತು. ಈ ಪ್ಯಾಕೆಟ್‌ಗಳ ಮೇಲೆ ಯಾರಿಗೂ ಸುಲಭವಾಗಿ ಅರ್ಥವಾಗದಂತೆ ‘Cannabis Sativa’ (ಗಾಂಜಾದ ಸಸ್ಯಶಾಸ್ತ್ರೀಯ ಹೆಸರು) ಎಂದು ನಮೂದಿಸಿ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಯತ್ನಿಸಲಾಗಿತ್ತು.

ಆದರೆ, ಈ ಖತರ್ನಾಕ್ ದಂಧೆಯ ಹಿಂದಿನ ಕಿಂಗ್‌ಪಿನ್‌ಗೆ ಪೊಲೀಸರು ಸರಿಯಾಗಿಯೇ ಶಾಕ್ ನೀಡಿದ್ದಾರೆ. ಖಚಿತ ಮಾಹಿತಿ ಬೆನ್ನತ್ತಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ ನೇತೃತ್ವದ ತಂಡ, ಪಂಚರ ಸಮಕ್ಷಮ ಅಂಗಡಿಯ ಮೇಲೆ ದಿಢೀರ್ ಸಿಡಿಲಂತೆ ಎರಗಿದೆ. ತಪಾಸಣೆಯ ವೇಳೆ ಸಿಕ್ಕ ಉತ್ಪನ್ನಗಳನ್ನು ಕಂಡು ಅನುಮಾನಗೊಂಡ ಪೊಲೀಸರು ತಕ್ಷಣವೇ ಸೊಕೊ (SOCO) ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಅಧಿಕಾರಿಗಳು ತಮ್ಮಲ್ಲಿದ್ದ ವಿಶೇಷ ಪ್ರಾಥಮಿಕ ಪರೀಕ್ಷಾ ಕಿಟ್ ಮೂಲಕ ಸ್ಥಳದಲ್ಲೇ ಪರೀಕ್ಷೆ ನಡೆಸಿದಾಗ, ಆ ಮೋದಕದ ಪ್ಯಾಕೆಟ್‌ಗಳಲ್ಲಿದ್ದುದು ಸಾಮಾನ್ಯ ಸಿಹಿಯಲ್ಲ, ಬದಲಿಗೆ ಮನುಷ್ಯನ ಮೆದುಳನ್ನೇ ಮರಗಟ್ಟಿಸುವ ಅಪಾಯಕಾರಿ ಮಾದಕ ಅಂಶ ಎಂಬುದು ದೃಢಪಟ್ಟಿದೆ!

ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಒಟ್ಟು 10 ಬಾಕ್ಸ್‌ಗಳಲ್ಲಿದ್ದ ಸುಮಾರು 1 ಕೆ.ಜಿ. 986 ಗ್ರಾಂ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯದ ಪ್ರಮುಖ ಆರೋಪಿ, ನಿರ್ಮಲನಗರದ 62 ವರ್ಷದ ವೃದ್ಧ ಸಂಜಯ ಮುರಳೀಧರ ಮಹೇಶ್ವರಿ ಎಂಬಾತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕಠಿಣ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.

ಜನ ಜಾಗೃತಿಗಾಗಿ ಒಂದು ಎಚ್ಚರಿಕೆ:

ಇದು ಕೇವಲ ಒಂದು ಅಂಗಡಿಯ ಮೇಲಿನ ದಾಳಿಯಲ್ಲ, ನಮ್ಮ ಮನೆ ಬಾಗಿಲಿಗೆ ಬಂದಿರುವ ಅಪಾಯದ ಮುನ್ಸೂಚನೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಆಕರ್ಷಕ ಹೆಸರುಗಳಲ್ಲಿ, ಚಾಕೊಲೇಟ್, ಮೋದಕ ಅಥವಾ ಜ್ಯೂಸ್ ರೂಪದಲ್ಲಿ ಇಂತಹ ಮಾದಕ ವಸ್ತುಗಳು ಯುವಕರನ್ನು, ವಿದ್ಯಾರ್ಥಿಗಳನ್ನು ಸೆಳೆಯಲು ಅಡಗಿರಬಹುದು. ಅಪರಿಚಿತ ಮೂಲಗಳಿಂದ ಬರುವ ಇಂತಹ ‘ವಿಶೇಷ’ ತಿನಿಸುಗಳ ಬಗ್ಗೆ ಹೆತ್ತವರು ಮತ್ತು ಸಾರ್ವಜನಿಕರು ತೀವ್ರ ನಿಗಾ ವಹಿಸಬೇಕಾಗಿದೆ. ನಿಮ್ಮ ಸುತ್ತಮುತ್ತ ಇಂತಹ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

ಪ್ರಸ್ತುತ ಈ ಪ್ರಕರಣದ ಮುಂದಿನ ತನಿಖೆಯನ್ನು ಪಿ.ಎಸ್.ಐ ಅಮೀನ್ ಅತ್ತಾರ್ ಅವರು ಕೈಗೆತ್ತಿಕೊಂಡಿದ್ದು, ಈ ಕರಾಳ ಜಾಲದ ಹಿಂದೆ ಅಡಗಿರುವ ಇತರ ಸೂತ್ರಧಾರರನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕಾದ ಸಮಯ ಇದಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250