ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರಸಿದ್ಧ ಚಾಪೆಲ್ ಯುದ್ಧ ನೌಕಾ ಮ್ಯೂಸಿಯಂ ಹಾಗೂ ಟುಪೋಲೇವ್ ಯುದ್ಧ ವಿಮಾನ ಮ್ಯೂಸಿಯಂ ಆವರಣದಲ್ಲಿ ಎಂದಿನಂತೆ ಪ್ರವಾಸಿಗರ ಗಿಜಿಗುಟ್ಟುತ್ತಿದ್ದ ಆ ದಿನ, ಇದ್ದಕ್ಕಿದ್ದಂತೆ ಎಲ್ಲರ ಕಣ್ಣುಗಳು ಒಂದೆಡೆ ನೆಟ್ಟವು. ಆಕಾಶದಿಂದಿಳಿದ ಆ ‘ಪ್ರವಾಸಿಗ’ ಮನುಷ್ಯನಾಗಿರಲಿಲ್ಲ, ಬದಲಿಗೆ ಆಳ ಸಮುದ್ರದ ಅಲೆಗಳ ಮೇಲೆ ತೇಲುತ್ತಾ ಬದುಕುವ, ಉಷ್ಣವಲಯದ ಮಹಾಸಾಗರಗಳಲ್ಲಷ್ಟೇ ಕಾಣಸಿಗುವ ಅತ್ಯಂತ ವಿರಳ ಪ್ರಭೇದದ ಕಡಲ ಹಕ್ಕಿ ‘ರೆಡ್ ಫೂಟೆಡ್ ಬೂಬಿ’

ಸಾವಿರಾರು ಮೈಲಿ ಹಾರಿಬಂದ ಆಯಾಸದಿಂದಲೋ ಏನೋ, ಮ್ಯೂಸಿಯಂ ಆವರಣದಲ್ಲಿ ಒಂದೆಡೆ ಕುಸಿದು ಕುಳಿತಿದ್ದ ಈ ಸುಂದರ ಹಕ್ಕಿಯನ್ನು ಮೊದಲು ಗಮನಿಸಿದ್ದು ಟೂರಿಸ್ಟ್ ಗೈಡ್ ವಿಜಯ ಅವರು. ಹತ್ತಿರ ಹೋಗಿ ನೋಡಿದಾಗ ಹಕ್ಕಿಯ ಕಣ್ಣಿಗೆ ಬಲವಾದ ಪೆಟ್ಟಾಗಿ ನೀರು ಸುರಿಸುತ್ತಾ ನಿಶ್ಶಕ್ತಗೊಂಡಿರುವುದು ಸ್ಪಷ್ಟವಾಯಿತು. ಸಮಯಪ್ರಜ್ಞೆ ಮೆರೆದ ವಿಜಯ ಅವರು ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಮರೈನ್ ಆರ್‌ಎಫ್‌ಒ ಗಜಾನನ ನಾಯ್ಕ ಅವರ ಸೂಚನೆಯಂತೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ರಾಜೇಶ್, ಜಾಗರೂಕತೆಯಿಂದ ಹಕ್ಕಿಯನ್ನು ಕೈಗೆತ್ತಿಕೊಂಡು ಪಶುವೈದ್ಯರ ಬಳಿ ಕರೆದೊಯ್ದರು. ಸದ್ಯ ಹಕ್ಕಿಯ ಕಣ್ಣಿಗೆ ಔಷಧೋಪಚಾರ ನಡೆಯುತ್ತಿದ್ದು, ಐದು ದಿನಗಳ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಸಂಪೂರ್ಣ ಚೇತರಿಕೆಯ ಬಳಿಕ ಈ ಗಗನಪಥಿಕನನ್ನು ಮತ್ತೆ ಕಡಲ ಮಡಿಲಿಗೆ ಹಾರಿಬಿಡಲಾಗುವುದು.

ಪೆಸಿಫಿಕ್, ಅಟ್ಲಾಂಟಿಕ್ ಹಾಗೂ ಹಿಂದೂ ಮಹಾಸಾಗರಗಳ ದ್ವೀಪಗಳಲ್ಲಿ, ಅದರಲ್ಲೂ ವಿಶೇಷವಾಗಿ ಗ್ಯಾಲಪಗೋಸ್ ದ್ವೀಪ ಸಮೂಹದಲ್ಲಿ ವಾಸಿಸುವ ಈ ಹಕ್ಕಿ, ಬೂಬಿ ತಳಿಯಲ್ಲೇ ಅತ್ಯಂತ ಚಿಕ್ಕದು. 70-75 ಸೆಂ.ಮೀ. ಉದ್ದವಿರುವ ಇದು ರೆಕ್ಕೆ ಬಿಚ್ಚಿದಾಗ 1.4 ಮೀಟರ್‌ಗಳಷ್ಟು ವಿಸ್ತಾರವಾಗಿ ಚಾಚುತ್ತದೆ. ನೀರೊಳಗೆ ಕ್ಷಣಾರ್ಧದಲ್ಲಿ ಧುಮುಕಿ ಮೀನು ಹಿಡಿಯುವ ಇದರ ಕೌಶಲ ಪಕ್ಷಿಲೋಕದಲ್ಲೇ ಪ್ರಸಿದ್ಧ.
ಆದರೆ ಇಲ್ಲೊಂದು ಕುತೂಹಲದ ಪ್ರಶ್ನೆ ಉಳಿದುಕೊಂಡಿದೆ. ಸಾಮಾನ್ಯವಾಗಿ ಈ ಹಕ್ಕಿಗಳು ಒಂಟಿಯಾಗಿ ಎಲ್ಲೂ ಕಂಡುಬರುವುದೇ ಇಲ್ಲ; ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಸೇರಿ ಬೃಹತ್ ಕಾಲೋನಿಗಳಲ್ಲಿ ಬಾಳುವ ಸಮಾಜಜೀವಿಗಳಿವು. ಹಾಗಿದ್ದರೆ ತನ್ನ ಪಡೆಯಿಂದ ಬೇರ್ಪಟ್ಟು, ಸಾವಿರಾರು ಮೈಲಿ ದೂರದ ಕಾರವಾರದ ಕಡಲತೀರಕ್ಕೆ ಈ ಸಾಹಸಿ ಹಕ್ಕಿ ಒಂಟಿಯಾಗಿ ಬಂದಿದ್ದಾದರೂ ಹೇಗೆ? ದಾರಿ ತಪ್ಪಿ ಚಂಡಮಾರುತಕ್ಕೆ ಸಿಲುಕಿತೇ, ಅಥವಾ ಸಂಗಾತಿಯ ಹುಡುಕಾಟದಲ್ಲಿ ಇಷ್ಟು ದೂರ ಹಾರಿಬಂತೇ ಎಂಬುದು ಇನ್ನೂ ನಿಗೂಢ. ಈ ಕಡಲ ಅತಿಥಿಯ ಆಗಮನ ಕಾರವಾರದ ಪಕ್ಷಿಪ್ರೇಮಿಗಳಲ್ಲಿ ಮತ್ತು ಸಾಗರ ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
