ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಉತ್ತರ ಕನ್ನಡದ ಭವಿಷ್ಯಕ್ಕೆ ಬಿಗ್ ಪ್ಲಾನ್!

Pakka News Web • 22 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯ ಚಹರೆಯನ್ನು ಮುಂಬರುವ ದಿನಗಳಲ್ಲಿ ಸಂಪೂರ್ಣ ಬದಲಾಯಿಸಿ, ಸರ್ವಾಂಗೀಣ ಹಾಗೂ ಸುಸ್ಥಿರ ಪ್ರಗತಿಯತ್ತ ಕೊಂಡೊಯ್ಯಲು ಜಿಲ್ಲಾಡಳಿತ ಭಾರಿ ಮುನ್ನೋಟದೊಂದಿಗೆ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲು ಅಧಿಕಾರಿಗಳು ದೂರದೃಷ್ಟಿ ಯೋಜನೆಗಳನ್ನು ಒಳಗೊಂಡ ಸಮಗ್ರ ವರದಿ ಸಿದ್ಧಪಡಿಸಬೇಕೆಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಉತ್ತರ ಕನ್ನಡ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025’ ಹಾಗೂ ‘ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031’ ರ ಅಂತಿಮ ರೂಪುರೇಷೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ದಾರಿ ತೋರಿದ ಜಿಲ್ಲಾಧಿಕಾರಿಗಳು, ಬರಿ ಕಾಗದದ ಮೇಲೆ ಯೋಜನೆಗಳನ್ನು ಸಿದ್ಧಪಡಿಸಿದರೆ ಸಾಲದು, ಪ್ರತಿಯೊಂದು ಇಲಾಖೆಯೂ ಮುಂಜಾಗ್ರತೆಯಿಂದ ತಮ್ಮ ಪ್ರಸ್ತಾವನೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು. ಜಿಲ್ಲೆಗೆ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಭೇಟಿ ನೀಡಿದ ತಕ್ಷಣವೇ ಈ ಬೇಡಿಕೆಗಳನ್ನು ಅವರ ಮುಂದಿಟ್ಟು, ಯೋಜನೆಗಳಿಗೆ ಶೀಘ್ರ ಮಂಜೂರಾತಿ ಹಾಗೂ ಅನುದಾನ ಗಿಟ್ಟಿಸಿಕೊಳ್ಳುವ ಚಾಣಾಕ್ಷತನವನ್ನು ತೋರಿಸಬೇಕು.

ಆಗ ಮಾತ್ರ ಯೋಜನೆಗಳು ತಡವಿಲ್ಲದೇ ಅನುಷ್ಠಾನಗೊಂಡು ಸಾರ್ವಜನಿಕರಿಗೆ ತಲುಪಲು ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ಅಂಕಿ-ಅಂಶಗಳ ನಿಖರತೆಗೆ ಒತ್ತು ನೀಡಿದ ಅವರು, ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳ ಆದಾಯ, ಸರ್ಕಾರದಿಂದ ಬರುವ ಅನುದಾನದ ಲೆಕ್ಕಾಚಾರಗಳನ್ನು ಮರುಪರಿಶೀಲಿಸಿ, ವರದಿಯಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಿದರು.

ಸಭೆಯಲ್ಲಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಗ್ರಾಮೀಣ ಭಾಗದ ವಸತಿ ರಹಿತರು ಮತ್ತು ನಿವೇಶನ ರಹಿತರ ನೈಜ ಚಿತ್ರಣವನ್ನು ಪ್ರಸ್ತುತಪಡಿಸಲು 2018 ರ ಸಮೀಕ್ಷೆ ಹಾಗೂ ಇಂದಿನ ವಾಸ್ತವಿಕ ದತ್ತಾಂಶಗಳನ್ನು ತಾಳೆ ನೋಡಿ ನಿಖರ ಮಾಹಿತಿ ದಾಖಲಿಸಲು ತಿಳಿಸಿದರು. ಜೊತೆಗೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ತರಬಲ್ಲ ವಾಟರ್‌ಶೆಡ್, ಹನಿ ಮತ್ತು ತುಂತುರು ನೀರಾವರಿಯ ಕಳೆದ 7 ವರ್ಷಗಳ ಸಂಪೂರ್ಣ ಮಾಹಿತಿಯನ್ನು ಕ್ರೋಢೀಕರಿಸಿ ನೀಡುವಂತೆ ಸೂಚಿಸಿದರು.

ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಎಸ್. ಅಲ್ಲಾಬಕಷ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಭಾಗವಹಿಸಿ ತಮ್ಮ ಸಲಹೆ-ಸೂಚನೆಗಳನ್ನು ಹಂಚಿಕೊಂಡರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250