ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನರ್ರಚನೆಯ ಕಾವು ಏರುತ್ತಿದ್ದಂತೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ರಾಜಕಾರಣದಲ್ಲಿ ಭಾರಿ ಕುತೂಹಲ ಮನೆಮಾಡಿದೆ. ಮುಖ್ಯಮಂತ್ರಿಗಳು ನವದೆಹಲಿ ಪ್ರವಾಸದಲ್ಲಿರುವ ಬೆನ್ನಲ್ಲೇ, ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಸತೀಶ್ ಸೈಲ್ ಅವರು, ಪ್ರಸ್ತುತ ಎಂಸಿಎ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ವೈವಿಧ್ಯಮಯ ಅಭಿವೃದ್ಧಿ ಕೆಲಸಗಳು, ವಿಶೇಷವಾಗಿ ‘ಸೇತುವೆಗಳ ಸರದಾರ’ ಎಂದೇ ಹೆಸರುವಾಸಿಯಾಗಿರುವ ಅವರ ಆಡಳಿತಾತ್ಮಕ ದಕ್ಷತೆ ಹಾಗೂ ಸಂಘಟನಾ ಚಾತುರ್ಯವು ಈ ಬಾರಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ಗಮನ ಸೆಳೆದಿದೆ ಎನ್ನಲಾಗಿದೆ.
ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಹಾಗೂ ಅನುಭವಿ ರಾಜಕಾರಣಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಹಾಗೂ ಪ್ರಸ್ತುತ ಸಚಿವ ಮಂಕಾಳು ವೈದ್ಯ ಅವರ ಹೆಸರುಗಳು ಸಹ ಸಂಪುಟದ ವಲಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ. ಜಿಲ್ಲಿಗೆ ಸಚಿವ ಸ್ಥಾನದ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಲೆಕ್ಕಾಚಾರ ನಡೆಸುತ್ತಿದ್ದು, ಸತೀಶ್ ಸೈಲ್ ಅವರ ಹೆಸರೂ ಸಹ ರೇಸ್ನಲ್ಲಿ ಮುಂಚೂಣಿಯಲ್ಲಿದೆ.
ದೆಹಲಿಯಲ್ಲಿ ನಡೆಯುತ್ತಿರುವ ವರಿಷ್ಠರ ಸಭೆಗಳು ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಚರ್ಚೆಗಳು ಅಂತಿಮ ಹಂತ ತಲುಪುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹೊಸ ವೇಗ ನೀಡಬಲ್ಲ ನಾಯಕತ್ವಕ್ಕೆ ಮನ್ನಣೆ ಸಿಗಲಿದೆಯೇ ಎಂಬ ಕುತೂಹಲ ಸದ್ಯ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
