ಸಿದ್ದಾಪುರ: ಒಂದೆಡೆ ದೇಶವು ಮುನ್ನಡೆಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಆಡಳಿತ ವರ್ಗ, ಇನ್ನೊಂದೆಡೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಒಂದು ಬಿಂದಿಗೆ ಕುಡಿಯುವ ನೀರು ಪೂರೈಸಲು ವಿಫಲವಾಗಿರುವುದಕ್ಕೆ ಸಿದ್ದಾಪುರ ತಾಲೂಕಿನ ಕಾನಸೂರ್ ಪಂಚಾಯತ್ ವ್ಯಾಪ್ತಿಯ ಗಣೇಶನಗರ ಸಾಕ್ಷಿಯಾಗಿದೆ.

ಮೂಲಭೂತ ಹಕ್ಕಾಗಿರುವ ಕುಡಿಯುವ ನೀರಿಗಾಗಿ ಜಯಶೀಲ ಕಾನಡೆ ಹಾಗೂ ಸವಿತಾ ಕಾನಡೆ ಕುಟುಂಬವು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕಣ್ಣೀರು ಹಾಕುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಸರ್ಕಾರದಿಂದ ನೀರು ಪೂರೈಕೆಗಾಗಿ ಅಥವಾ ಬಾವಿ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದ್ದರೂ, ಕಾಮಗಾರಿ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ.

ಸ್ಥಳೀಯರ ತಕರಾರು ಇದೆ ಎಂಬ ನೆಪವೊಡ್ಡಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವುದು ಆಡಳಿತ ವ್ಯವಸ್ಥೆಯ ನಿಸ್ಸಹಾಯಕತೆ ಮತ್ತು ಅಸಡ್ಡೆಯನ್ನು ತೋರಿಸುತ್ತದೆ. ನಾವು ದಲಿತರು ಎಂಬ ಏಕೈಕ ಕಾರಣಕ್ಕೆ ನಮಗೆ ಈ ರೀತಿಯ ಅನ್ಯಾಯವೆಸಗಲಾಗುತ್ತಿದೆ ಎಂದು ಆ ಕುಟುಂಬವು ಕಣ್ಣೀರು ಹಾಕುತ್ತಾ ವ್ಯಕ್ತಪಡಿಸಿರುವ ನೋವು, ಇಂದಿಗೂ ಸಮಾಜದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ ಮತ್ತು ತಾರತಮ್ಯದ ಕ್ರೂರ ಮುಖವನ್ನು ಅನಾವರಣಗೊಳಿಸಿದೆ.
ಕುಡಿಯುವ ನೀರು ಯಾವುದೇ ಒಂದು ವರ್ಗದ ಹಕ್ಕಲ್ಲ, ಅದು ಜೀವಿಸುವ ಹಕ್ಕು. ಹತ್ತು ವರ್ಷಗಳಿಂದ ಮನವಿ ಸಲ್ಲಿಸಿದರೂ ಕರಗದ ಅಧಿಕಾರಿಗಳ ಮನಸ್ಸು, ವ್ಯವಸ್ಥೆಯು ಎಷ್ಟರಮಟ್ಟಿಗೆ ಸಂವೇದನಾಹೀನವಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿರುವ ನಮಗೆ, ಈ ಕುಟುಂಬದ ಬಾಯಾರಿಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಆಗಸ್ಟ್ 15ರ ಒಳಗಾಗಿ ಈ ಸುದೀರ್ಘ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿದ್ದರೆ, ಸಿದ್ದಾಪುರ ತಾಲೂಕಿನ ಎಲ್ಲಾ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಕಾನಸೂರ್ ಪಂಚಾಯತ್ ಎದುರು ಬೃಹತ್ ಮಟ್ಟದ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿವೆ.
ಆಡಳಿತದ ಕಣ್ಣು ತೆರೆಯುವುದೇ?
ಒಂದು ಕುಟುಂಬವು ದಿನನಿತ್ಯದ ಕುಡಿಯುವ ನೀರಿಗಾಗಿ ದಶಕಗಳ ಕಾಲ ಸರ್ಕಾರಿ ಕಚೇರಿಗಳ ಬಾಗಿಲು ತಟ್ಟುವುದು ಮತ್ತು ಕೊನೆಗೆ ಹೋರಾಟದ ಹಾದಿ ಹಿಡಿಯುವುದು ದುರದೃಷ್ಟಕರ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಗಳು ಮತ್ತು ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದರೆ, ಅದು ಕೇವಲ ಒಂದು ಕುಟುಂಬಕ್ಕೆ ಮಾಡುವ ಅನ್ಯಾಯವಲ್ಲ, ಇಡೀ ಮಾನವೀಯತೆಗೆ ಎಸಗುವ ಅಪರಾಧ.
ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ತಕರಾರುಗಳನ್ನು ಇತ್ಯರ್ಥಪಡಿಸಿ ಜಯಶೀಲ ಕಾನಡೆ ಕುಟುಂಬಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ದಿದ್ದರೆ, ಆಡಳಿತ ವರ್ಗದ ಈ ನಿರ್ಲಕ್ಷ್ಯದ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟುವುದು ಖಚಿತ.
