‘ಪ್ರೀತಿಸು ಇಲ್ಲವೇ ನರಕ ತೋರಿಸುತ್ತೇನೆ’ ಇದು ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಾಡುತ್ತಿರುವ ಅಪಾಯಕಾರಿ ಮನಸ್ಥಿತಿ. ಇಂತಹದ್ದೇ ಒಂದು ವಿಕೃತ ಪ್ರೇಮದ ಜಾಲಕ್ಕೆ ಸಿಲುಕಿ ಯುವತಿಯೊಬ್ಬಳು ಅನುಭವಿಸಿದ ನರಕಯಾತನೆ ಹಾಗೂ ಆಕೆಯ ಮೇಲಾದ ಭೀಕರ ದಾಳಿ ಈಗ ಅಂಕೋಲಾ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.
ಅವರ್ಸಾದ ಸಕಲಬೇಣ ನಿವಾಸಿಯಾದ ಯುವಕನೊಬ್ಬ ಕಳೆದ ಕೆಲವು ತಿಂಗಳಿಂದ ಆ ಯುವತಿಯ ಬೆನ್ನಿಬಿದ್ದಿದ್ದ. ಪ್ರೀತಿಯ ಹೆಸರಿನಲ್ಲಿ ಆರಂಭವಾದ ಆತನ ವೀಕ್ನೆಸ್, ದಿನ ಕಳೆದಂತೆ ಪೀಡೆಯಾಗಿ ರೂಪಾಂತರಗೊಂಡಿತ್ತು.

ಆತನ ಕಿರುಕುಳ ತಾಳಲಾರದೆ ಯುವತಿ ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿದರೆ, ಈತ ಹೊಸ ಹೊಸ ನಂಬರ್‌ಗಳಿಂದ ಕರೆ ಮಾಡಿ ಬೆದರಿಸುವ ತಂತ್ರ ಹೆಣೆದಿದ್ದ. ಜೂನ್ 22ರಂದು ಕರೆ ಮಾಡಿ ನನ್ನನ್ನು ಪ್ರೀತಿಸದಿದ್ದರೆ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಅವಾಚ್ಯವಾಗಿ ನಿಂದಿಸಿ ಆಕೆಯ ಮಾನಸಿಕ ನೆಮ್ಮದಿಯನ್ನೇ ಕಸಿದುಕೊಂಡಿದ್ದ.
ಆಗಸ್ಟ್ 6ರ ಸಂಜೆ ಯುವತಿ ತನ್ನ ಸ್ನೇಹಿತರೊಂದಿಗೆ ಶಾಂತಿಯುತವಾಗಿ ಮನೆಗೆ ತೆರಳುತ್ತಿದ್ದಾಗ, ಕಾಯುತ್ತಿದ್ದ ಆರೋಪಿ ರಾಕ್ಷಸನಂತೆ ಎರಗಿಬಂದಿದ್ದಾನೆ. ಹಾದಿಯಲ್ಲೇ ಆಕೆಯ ದಾರಿ ತಡೆದು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಧೈರ್ಯಗೆಡದ ಯುವತಿ ತನ್ನ ತಂದೆಗೆ ಕರೆ ಮಾಡುವಂತೆ ಸ್ನೇಹಿತರಿಗೆ ಸೂಚಿಸುತ್ತಿದ್ದಂತೆ, ಆಕ್ರೋಶಗೊಂಡ ಆರೋಪಿ, ಸಾರ್ವಜನಿಕರ ಎದುರಲ್ಲೇ ಆಕೆಯ ಕೆನ್ನೆಗೆ ಬಾರಿಸಿ, ಮೈಮೇಲೆ ಕೈಮಾಡಿ ರಾಕ್ಷಸೀಯವಾಗಿ ಹಲ್ಲೆ ನಡೆಸಿದ್ದಾನೆ.
ನನ್ನ ಪ್ರೀತಿ ಒಪ್ಪದಿದ್ದರೆ ನಿನ್ನ ಹೆಸರನ್ನೇ ಡೆತ್‌ನೋಟ್‌ನಲ್ಲಿ ಬರೆದಿಟ್ಟು ಸಾಯುತ್ತೇನೆ ಎಂದು ಹೊಸ ರೀತಿಯ ಮಾನಸಿಕ ಬ್ಲಾಕ್‌ಮೇಲ್ ತಂತ್ರ ಹೂಡಿ, ಜೀವಬೆದರಿಕೆಯೊಡ್ಡಿದ್ದ.
ಏಕಪಕ್ಷೀಯ ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ನಿರಂತರ ಕಿರುಕುಳ, ಹಲ್ಲೆ ಹಾಗೂ ಜೀವಭಯದಿಂದ ಕಂಗಾಲಾಗಿರುವ ಯುವತಿ, ಅಂತಿಮವಾಗಿ ಕಾನೂನಿನ ಮೊರೆ ಹೋಗಿದ್ದಾರೆ. ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
