ಸಿದ್ದಾಪುರ ತಾಲೂಕಿನ ಕಾನಗೋಡು ಸಮೀಪದ ಐಗೋಡ್ ಭಾಗದಲ್ಲಿ ಬೆಳಕಿಗೆ ಬಂದಿರುವ ಒಂದು ಅಸಹಜ ದೃಶ್ಯ ಇಡೀ ಗ್ರಾಮಸ್ಥರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಹಚ್ಚಹಸಿರಿನ ಕೃಷಿ ಭೂಮಿಯ ಪಕ್ಕದಲ್ಲೇ ಇರುವ ಮೀಸಲು ಅರಣ್ಯದ ನಿಶ್ಯಬ್ದ ವಾತಾವರಣದಲ್ಲಿ, ಯಾರೂ ಊಹಿಸದ ನಿಗೂಢ ಕೃತ್ಯವೊಂದು ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಕ್ರಗುಂಡಿ ಬಳಿಯ ಅರಣ್ಯ ಪ್ರದೇಶದಲ್ಲಿ ಹಿಂದೂ ಸಂಪ್ರದಾಯದಂತೆ ವಿಧಿ-ವಿಧಾನ ನಡೆಸಿ, ಯಾವುದೋ ಶವವನ್ನು ಹೂತಿಟ್ಟಿರುವಂತಹ ಕುರುಹುಗಳು ಪತ್ತೆಯಾಗಿದ್ದು ಇಡೀ ಸುತ್ತಮುತ್ತಲಿನ ಪರಿಸರದಲ್ಲಿ ದಿಗಿಲು ಮೂಡಿಸಿದೆ.
ಕಾನನದ ಗಡಿಯಂಚಿನಲ್ಲಿ ಕಂಡುಬಂದಿರುವ ಈ ವಿಲಕ್ಷಣ ಕುರುಹುಗಳು ಕ್ಷುದ್ರಪೂಜೆ ಅಥವಾ ವಾಮಾಚಾರದ ಕೃತ್ಯವೇ ಇರಬಹುದು ಎಂಬ ಬಲವಾದ ಶಂಕೆಯನ್ನು ಸ್ಥಳೀಯರಲ್ಲಿ ಹುಟ್ಟುಹಾಕಿದೆ. ಸಂಸ್ಕಾರದ ಮಾದರಿಯಲ್ಲೇ ನಡೆದಿರುವ ಈ ನಿಗೂಢ ಕೆಲಸದಲ್ಲಿ ಮನುಷ್ಯನ ಶವವನ್ನು ಹೂಳಲಾಗಿದೆಯೇ ಅಥವಾ ವಾಮಾಚಾರದ ಭಾಗವಾಗಿ ಕುರಿ, ಕೋಳಿಗಳನ್ನು ಬಲಿಕೊಟ್ಟು ಮಣ್ಣು ಮಾಡಲಾಗಿದೆಯೇ ಎಂಬ ಭೀತಿ ಜನರ ನಿದ್ದೆಗೆಡಿಸಿದೆ. ಅರಣ್ಯದ ನಡುವೆ ನಡೆದ ಈ ನಿಗೂಢ ಸಂಸ್ಕಾರದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಆತಂಕದ ಛಾಯೆ ಆವರಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಸಲಿಗೆ ಆ ಮಣ್ಣಿನಡಿ ಮುಚ್ಚಿಟ್ಟಿರುವ ರಹಸ್ಯವೇನು? ಇದು ದುಷ್ಕರ್ಮಿಗಳು ನಡೆಸಿದ ವಾಮಾಚಾರದ ಅಟ್ಟಹಾಸವೋ ಅಥವಾ ಇದರ ಹಿಂದೆ ಬೇರೇನಾದರೂ ಕರಾಳ ಕಥೆಯಿದೆಯೋ ಎನ್ನುವ ಪ್ರಶ್ನೆಗಳು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿವೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸ್ಪಷ್ಟ ಮಾಹಿತಿ ನೀಡಿದ ನಂತರವಷ್ಟೇ ಈ ನಡುಕ ಹುಟ್ಟಿಸುವ ರಹಸ್ಯಕ್ಕೆ ತೆರೆಬೀಳಬೇಕಿದೆ. ಈ ಘಟನೆಯಲ್ಲಿ ಎಷ್ಟು ಸತ್ಯಾಂಶ ಇದೆ ಎನ್ನುವುದು ಪತ್ತೆ ಆಗಬೇಕಾಗಿದೆ.
